ಕೊಪ್ಪಳ :ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಉಕ್ರೇನ್ನಲ್ಲಿ ಜಿಲ್ಲೆಯ ವಿದ್ಯಾರ್ಥಿ ಸಿಲುಕಿಕೊಂಡಿದ್ದಾರೆ. ಇಂದು ಆತನ ಮನೆಗೆ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿ ವಿದ್ಯಾರ್ಥಿಯ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದ ಸಂಗಮೇಶ ಸೊಪ್ಪಿಮಠ ಎಂಬ ಯುವಕ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ಗೆ ತೆರಳಿದ್ದಾರೆ. ಸದ್ಯ ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಪೋಷಕರು ಆತಂಕದಲ್ಲಿದ್ದಾರೆ.
ಇಂದು ವಿದ್ಯಾರ್ಥಿ ಮನೆಗೆ ಸಚಿವ ಹಾಲಪ್ಪ ಆಚಾರ್ ತೆರಳಿದ್ದರು. ಈ ವೇಳೆ ಉಕ್ರೇನ್‌ನ ಕೀವ್ ನಗರದಲ್ಲಿರುವ ವಿದ್ಯಾರ್ಥಿ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಪರಿಸ್ಥಿತಿ ಕುರಿತಂತೆ ಮಾಹಿತಿ ಪಡೆದರು.
ಇದೇ ವೇಳೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೋಡಿ ಭಯವಾಗುತ್ತದೆ. ಅಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸುವಂತೆ ವಿದ್ಯಾರ್ಥಿಯ ತಂದೆ ಪ್ರಭುಸ್ವಾಮಿ ಸಚಿವರಲ್ಲಿ ಮನವಿ ಮಾಡಿದರು.