ಕೊಪ್ಪಳ :ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ಸುಮಾರು 30ಕ್ಕೂ ಅಧಿಕ ಮನೆಗಳು ಬಿದ್ದಿದ್ದವು. ಮಳೆ ಬಂದು ಹೋಗಿ ಸರಿಸುಮಾರು 6 ತಿಂಗಳು ಗತಿಸಿದರೂ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಮುಂಗಾರುಮಳೆ ಆರಂಭವಾಗಿದೆ. ಮನೆ ಕಳೆದುಕೊಂಡು ಗ್ರಾಮಸ್ಥರು ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ಇದು ಕೊಪ್ಪಳ ನಗರದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಓಜನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಟಣಕನಕಲ್ಲು ಗ್ರಾಮ ವಾಸಿಗಳ ಗೋಳಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವರ್ಷ ವಾಡಿಕೆಗಿಂತ ಶೇ.40ರಷ್ಟು ಅಧಿಕ ಮಳೆಯಾಗಿದೆ. ಅದರಲ್ಲಿಯೂ ನವಂಬರ್ ತಿಂಗಳು 18, 19 ಹಾಗೂ 20ರಂದು ಸುರಿದ ಭಾರಿ ಮಳೆಗೆ ಟಣಕನಕಲ್ಲಿನಲ್ಲಿ ಸುಮಾರು 30 ಮನೆಗಳು ಸಂಪೂರ್ಣವಾಗಿ ಬಿದ್ದಿವೆ. ಆಗ ಮನೆ ಕಳೆದುಕೊಂಡವರಿಗೆ ಈವರೆಗೂ ಸೂರು ಕಲ್ಪಿಸಿಲ್ಲ. ಮಳೆಯಿಂದ ಮನೆ ಕಳೆದುಕೊಂಡವರು ಈಗ ಬೀದಿಯಲ್ಲಿ ವಾಸಿಸುವಂತಾಗಿದೆ.
ಪರಿಹಾರ ನೀಡುವಂತೆ ಗ್ರಾಮಸ್ಥರ ಒತ್ತಾಯ ಈ ವರ್ಷವೂ ಸಹ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಅಲ್ಲಲ್ಲಿ ಭಾರಿ ಮಳೆ ಸುರಿಯತೊಡಗಿದೆ. ಮತ್ತೆ ಅವಘಡಗಳು ಸಂಭವಿಸುವ ಮೊದಲು ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ನವಂಬರ್ ತಿಂಗಳ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇಲ್ಲಿ ಶೇ.100ರಷ್ಟು ಮನೆ ಕುಸಿದಿದ್ದರೂ ಶೇ.15ರಷ್ಟು ಮಾತ್ರ ಮನೆಗಳಿಗೆ ಹಾನಿಯಾಗಿದೆ ಎಂದು ವರದಿ ನೀಡಿದ್ದಾರೆ. ಇಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕೆಂದು ನಿರಾಶ್ರಿತರು ಆಗ್ರಹಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳನ್ನು ಕೇಳಿದರೆ ಈಗಾಗಲೇ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲಾಗಿದೆ. ಟಣಕನಕಲ್ ಗ್ರಾಮದಲ್ಲಿ ಯಾಕೆ ಒದಗಿಸಿಲ್ಲ ಎಂಬುವುದರ ಬಗ್ಗೆ ಸಂಬಂಧಿಸಿದವರನ್ನು ಕರೆಸಿ ಪರಿಶೀಲಿಸುವುದಾಗಿ ಹೇಳಿದ್ದಾರೆ.