ಕೊಪ್ಪಳ:ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನ ನಿಯಂತ್ರಿಸುವ ದಮ್ಮು ಪ್ರಧಾನಿ ಮೋದಿ ಅವರಿಗಿಲ್ಲ. ಮಿಸ್ಟರ್ ಮೋದಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಲ್ಲಿರುವ ಕಪ್ಪು ಹಣವನ್ನೆಲ್ಲಾ ತಂದು ಬಡವರಿಗೆ ತಲಾ 15 ಲಕ್ಷ ದಂತೆ ಹಂಚುತ್ತೇನೆ ಎಂದಿದ್ದರು. ಅಧಿಕಾರಕ್ಕೆ ಬಂದ ಮೇಲೆ ಏನ ಕೊಟ್ಟಿದ್ದಾರೆ?. ಹಿಂದೆ ಕಾಂಗ್ರೆಸ್ ಸರ್ಕಾರವನ್ನು 10 ಪರ್ಸಂಟೇಜ್ ಸರ್ಕಾರ ಎಂದು ಅಪಹಾಸ್ಯ ಮಾಡಿದ್ದರು. ಇಂದು ಅವರದೇ ಸರ್ಕಾರ 40 ಪರ್ಸಂಟೇಜ್ ಕೊಳ್ಳೆ ಹೊಡಿತಿದೆ. ಏನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ನ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.
ಬಿಜೆಪಿಯ ಯಡಿಯೂರಪ್ಪ ಮತ್ತೆ ಅವರ ಮಗ ದುಬೈಗೆ ಯಾಕೆ ಹೋಗುತ್ತಾರೆ?. ಅವರು 10 ಸಾವಿರ ಕೋಟಿ ರೂಪಾಯಿ ಹಣ ಹೂಡಿಕೆ ಮಾಡುತ್ತಾರೆ ಎಂದು ಅವರದೇ ಪಕ್ಷದ ಶಾಸಕ ಯತ್ನಾಳ ಹೇಳಿದ್ದಾರೆ. ಇದರ ಬಗ್ಗೆ ಮೋದಿ ಏನು ಕ್ರಮ ತೆಗೆದುಕೊಂಡಿದ್ದಾರೆ. ಬೆಲೆಯೇರಿಕೆಯ ಬಗ್ಗೆ ಮೋದಿ ರಾಜ್ಯದ ಜನತೆಗೆ ಉತ್ತರ ನೀಡಬೇಕು. ದೇಶದಲ್ಲಿ ಸಾಮರಸ್ಯ, ಗಡಿ ಕಾಯಿಯುವಲ್ಲಿ ವಿಫಲರಾಗಿದ್ದಾರೆ. ಅವರ ವೈಫಲ್ಯಗಳನ್ನ ಪ್ರಶ್ನೆ ಮಾಡಿದ್ದಕ್ಕೆ ನ್ಯಾಷನಲ್ ಹೆರಾಲ್ಡ್ ಪ್ರಕರಣ ಹೊರ ತಂದು ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.