ಕರ್ನಾಟಕ

karnataka

ETV Bharat / state

ಕೊಪ್ಪಳದ ಹುಲಿಗೆಮ್ಮನ ಮೇಲಾಣೆಗೂ ಕೇಂದ್ರದಲ್ಲಿ ಮೋದಿ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ:ಕೆ.ಎಸ್.ಈಶ್ವರಪ್ಪ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಕೊಪ್ಪಳದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಕೆ.ಎಸ್.ಈಶ್ವರಪ್ಪ ಹುರಿದುಂಬಿಸಿದರು.

ಬಿಜೆಪಿ ಹಿರಿಯ ಮುಖಂಡ ಕೆ.ಎಸ್ ಈಶ್ವರಪ್ಪ
ಬಿಜೆಪಿ ಹಿರಿಯ ಮುಖಂಡ ಕೆ.ಎಸ್ ಈಶ್ವರಪ್ಪ

By

Published : Jun 23, 2023, 7:01 PM IST

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ

ಕೊಪ್ಪಳ : ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ ಮತ್ತು ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಇದನ್ನು ಕೊಪ್ಪಳದ ಶಕ್ತಿದೇವತೆ ಹುಲಗಿಯ ಹುಲಿಗೆಮ್ಮನ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು. ಕೊಪ್ಪಳದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸದ್ಯ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರಕಾರ ಐದು ವರ್ಷ ಅಧಿಕಾರದಲ್ಲಿ ಇರುತ್ತೋ ಇಲ್ವೋ ಗೊತ್ತಿಲ್ಲ. ಆದರೆ, ಈ ಹಿಂದೆ 1985ರಲ್ಲಿ ರಾಜ್ಯದಲ್ಲಿ ಬಿಜೆಪಿ ಎರಡೇ ಸೀಟ್ ಗೆದ್ದಾಗಲೂ ನಾವು ಎದೆಗುಂದಿಲ್ಲ. ಇದೀಗ 66 ಶಾಸಕರಿದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದೇವೆ. ನಾವು ಎದೆಗುಂದೋ ಮಾತೇ ಇಲ್ಲ. ಈ ಹಿಂದೆ ಮಾಜಿ ಪ್ರಧಾನಮಂತ್ರಿ ಅಟಲ್​ ಬಿಹಾರಿ ವಾಜಪೇಯಿ ಅವರು, ಪ್ರಧಾನಮಂತ್ರಿ, ಎಂಪಿ, ಎಂಎಲ್ಎ ಸ್ಥಾನ ಹೋಗಬಹುದು. ಆದರೆ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಸ್ಥಾನ ಯಾರ ಕಿತ್ಕೊಳ್ಳೋಕೇ ಆಗೋದಿಲ್ಲ ಎಂದು ಹೇಳಿದ್ದರು.

ಚುನಾವಣೆ ಎಂದ ಮೇಲೆ ಸೋಲು- ಗೆಲುವು ಇದ್ದದ್ದೇ. ಯಾರು ಸೋತಿಲ್ಲ? ಸಿದ್ದರಾಮಯ್ಯ ಸೋತಿಲ್ವಾ? ಬಿಜೆಪಿ ಈ ಚುನಾವಣೆಯಲ್ಲಿ ಸೋತ ತಕ್ಷಣ ಎಲ್ಲವೂ ಇಲ್ಲಿಗೆ ಮುಗಿದಿಲ್ಲ. ಸೋಲೇ ಗೆಲುವಿನ ಮೆಟ್ಟಿಲು. ಸೋತಿದ್ದೇವೆ ಎಂದು ಬೆನ್ನು ತೋರಿಸಿ ಹೋಗದೇ ಮತ್ತೆ ಸಂಘಟನೆ ಮಾಡೋಣ. ನಾವೆಲ್ಲ ಲೋಕಸಭೆ ಚುನಾವಣೆ ಬರಲಿ ಎಂದು ಕಾಯುತ್ತಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಬಿಜೆಪಿ 25 ಲೋಕಸಭೆ ಸ್ಥಾನ ಗೆದ್ದಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಹೆದರುವ ಅಗತ್ಯವಿಲ್ಲ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 9 ವರ್ಷವಾಯ್ತು. ಮೋದಿ ಪ್ರಧಾನಿಯಾಗುವ ಮುಂಚೆ ದೇಶದ ಪರಿಸ್ಥಿತಿ ಏನಾಗಿತ್ತು?. ಮೋದಿ ಪ್ರಧಾನಿಯಾದ ಬಳಿಕ ದೇಶದ ಪರಿಸ್ಥಿತಿ ಹೇಗಿದೆ ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಇಂದು ಇಡೀ ವಿಶ್ವದಲ್ಲಿ ಭಾರತಕ್ಕೆ ವಿಶೇಷ ಗೌರವವಿದೆ. ಮೋದಿ ಪ್ರಧಾನಿಯಾದ ಮೇಲೆ ಭಾರತದ ಒಬ್ಬ ಸೈನಿಕನನ್ನು ಪಾಕಿಸ್ತಾನದ ಸೈನಿಕರು ಹೊಡೆದು ಹಾಕಿದರೆ ನೂರು ಪಾಕಿಸ್ತಾನಿ ಸೈನಿಕರನ್ನು ಹೊಡೆದು ಹಾಕಿ ಯಾರನ್ನೂ ಕೇಳಬೇಡಿ ಎಂಬ ಆದೇಶ ಮಾಡಿದರು.

ಮೋದಿ ಅವರ ಸ್ನೇಹ, ಪ್ರೀತಿಯಿಂದ ದೊಡ್ಡಣ್ಣ ಅಮೆರಿಕ ಮೋದಿಗೆ ನಮಸ್ಕಾರ ಮಾಡಿತು. ಪಾಕಿಸ್ತಾನ ಈಗ ಒಂದು ಕಡೆ ಇದ್ದರೆ ಉಳಿದ ದೇಶಗಳು ಭಾರತದ ಜೊತೆಗಿವೆ. ಭಾರತದ ಸ್ನೇಹಕ್ಕೆ ಇತರ ರಾಷ್ಟ್ರಗಳು ಹಾತೊರೆಯುತ್ತಿವೆ. ಇದು ಮೋದಿ ಅವರ 9 ವರ್ಷದ ಆಡಳಿತದ ಪ್ರಭಾವವಲ್ಲದೆ ಮತ್ತೇನು ಎಂದು ಈಶ್ವರಪ್ಪನವರು ಮೋದಿ ಸಾಧನೆಗಳನ್ನು ಹೊಗಳಿದರು.

ಅಕ್ಕಿ ಕೊಡ್ತಿರೋದು ಬಿಜೆಪಿ, ಹೆಸರು ಮಾತ್ರ ಸಿದ್ದರಾಮಯ್ಯಂದು:ವಿಧಾನಸಭಾ ಚುನಾವಣೆಗೂ ಮುನ್ನ ಗ್ಯಾರಂಟಿ ಘೋಷಣೆ ಮಾಡುವಾಗ ಕಾಂಗ್ರೆಸ್‌ನವರಿಗೆ ಬುದ್ದಿ ಇರಲಿಲ್ಲವೇ?. ಕಳೆದ ಹಲವು ವರ್ಷದಿಂದ ರಾಜ್ಯಕ್ಕೆ ಅಕ್ಕಿ ಕೊಡುತ್ತಿರುವುದು ಬಿಜೆಪಿ. ಆದರೆ ಹೆಸರು ಮಾತ್ರ ಸಿದ್ದರಾಯ್ಯನವರದು. ಜನರಿಗೆ ವಾಸ್ತವ ಅರ್ಥವಾಗಿದೆ. ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಈಶ್ವರಪ್ಪ ಕಿಡಿಕಾರಿದರು.

ಏಕರೂಪ ನಾಗರಿಕ ಸಂಹಿತೆ ವಿಚಾರ :ದೇಶಾದ್ಯಂತ ಎಲ್ಲೆಲ್ಲಿ ಹಳೆಯ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದಾರೋ, ಆ ಮಸೀದಿಗಳನ್ನು ಒಡೆದು ದೇವಸ್ಥಾನ ಕಟ್ಟೇ ಕಟ್ಟುತ್ತೇವೆ. ಅದಕ್ಕಾಗಿ ಸ್ವಾತಂತ್ರ್ಯ ಬಂದಿದೆ. ಆ ಸ್ವಾತಂತ್ರ್ಯವನ್ನು ಬಳಸಿಕೊಂಡು ದೇವಸ್ಥಾನ ಕಟ್ಟುತ್ತೇವೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುತ್ತೇವೆ. ಬೇರೆ ಬೇರೆ ಕಾನೂನನ್ನು ಬಿಜೆಪಿ ಒಪ್ಪಲ್ಲ. ಎಲ್ಲರಿಗೂ ಒಂದೇ ಕಾನೂನು ಎಂದರು.

ಇದನ್ನೂ ಓದಿ :ಬಡವರ ಓಟು ಹಾಕಿಸಿಕೊಂಡು ಮೋಸ ಮಾಡ್ತಿದ್ದೀರಾ, ಶಾಪ ತಟ್ಟುತ್ತದೆ: ಕೆ.ಎಸ್. ಈಶ್ವರಪ್ಪ

ABOUT THE AUTHOR

...view details