ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿಯ ತನಿಖೆ ಮಾಡಿದ್ದೀರಾ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದರು. ಗೋದ್ರಾ ಘಟನೆಗೆ ಸಂಬಂಧಿಸಿದಂತೆ ಒಬ್ಬರಿಗೂ ಶಿಕ್ಷೆ ಕೊಡಲು ಆಗಿಲ್ಲ. ಬಿಜೆಪಿ ಸರ್ಕಾರ ಪ್ರತಿಯೊಂದು ಬಿಲ್ ತಂದಿರುವುದು ವೋಟ್ ಬ್ಯಾಂಕ್‌ಗಾಗಿ ಎಂದು ಆರೋಪಿಸಿದರು.
ಸಿಎಎ ಎನ್ಆರ್ಸಿ ವಿರೋಧಿಸಿ ಪ್ರತಿಭಟನೆ ಮಂಗಳೂರಿಗೆ ಕಾಂಗ್ರೆಸ್ ನಿಯೋಗ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾಂಗ್ರೆಸ್‌ನವರು ಈ ದೇಶದ ಪ್ರತಿ ನಾಗರಿಕರ ಜೊತೆಗೆ ಇರುತ್ತಾರೆ. ನಮ್ಮ ಪಕ್ಷದಲ್ಲಿ ದಲಿತರು, ಬ್ರಾಹ್ಮಣರು, ಹಿಂದೂ, ಮುಸ್ಲಿಂ, ಸಿಖ್ ಎಲ್ಲರೂ ಇದ್ದಾರೆ. ಎಲ್ಲಿ ಅಶಾಂತಿ ಆಗುತ್ತೋ ಅಲ್ಲಿಗೆ ನಾವು ಹೋಗ್ತೇವೆ ಮತ್ತು ಸಾಂತ್ವನ ಹೇಳುತ್ತೇವೆ. ಪೌರತ್ವ ತಿದ್ದುಪಡಿ ಕಾಯ್ದೆ ಎನ್ಆರ್ಸಿ ಅಸಂವಿಧಾನಿಕ ಕಾಯ್ದೆ. ಇದರ ವಿರುದ್ಧ ನಮ್ಮ ಪಕ್ಷದ ನಾಯಕರು ನಿಂತುಕೊಂಡಿದ್ದಾರೆ ಎಂದರು.
ಬೆಂಗಳೂರಿನಲ್ಲಿನ ಪ್ರತಿಭಟನೆ ಸಂದರ್ಭದಲ್ಲಿ ಹಿಂದತ್ವ ಕುರಿತ ಅಶ್ಲೀಲ ಪದವಿದ್ದ ಪೋಸ್ಟ್ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದು ಯಾರು ಹಾಕಿದ್ದಾರೆ, ಮಂಗಳೂರಿನಲ್ಲಿ ಯಾರು ಕಲ್ಲು ಬಿಸಾಕಿದ್ದಾರೆ, ಜಾಮೀಯಾದಲ್ಲಿ ಯಾರು ಕಲ್ಲು ಬಿಸಾಕಿದ್ದಾರೆ ಎಂಬುದು ತನಿಖೆಯಾಗಲಿ ಎಂದು ಆಗ್ರಹಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ತಿದ್ದುಪಡಿ ವಿರೋಧಿಸಿ CAA ಹಾಗೂ NRC ವಿರೋಧಿ ಒಕ್ಕೂಟ ನಗರದ ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ಬೃಹತ್ ಪ್ರತಿಭಟನೆ ನಡೆಸಿದೆ. ದಲಿತ ಮುಖಂಡ ಮುಕುಂದರಾವ್ ಭವಾನಿಮಠ ಮಾತನಾಡಿ, ಮೋದಿ ಹಾಗೂ ಅಮಿತ್ ಶಾ ಈ ದೇಶದ ಮೂಲ ನಿವಾಸಿಗಳಲ್ಲ. ಬಿಜೆಪಿಯವರು, ಸಂಘ ಪರಿವಾರದವರು ಮಧ್ಯ ಏಶಿಯಾದವರು. ಆಫ್ಘಾನಿಸ್ತಾನ, ಪಾಕಿಸ್ತಾನದಿಂದ ಬರುವ ನಾಲ್ಕು ಕೋಟಿ ಜನರಿಗೆ ದೇಶದಲ್ಲಿ ಎಲ್ಲಿ ಜಾಗ ಕೊಡ್ತೀರಿ ಎಂದು ಪ್ರಶ್ನಿಸಿದರು. ಸಂವಿಧಾನವನ್ನು ಅಸ್ಥಿರಗೊಳಿಸುವ ಈ ಕಾನೂನನ್ನು ಕೂಡಲೇ ರದ್ದುಪಡಿಸಬೇಕು. ಕಾಯ್ದೆಯನ್ನು ವಾಪಸ್ ಪಡೆಯವವರೆಗೂ ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.
ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ್ ಶೀಲವಂತರ್, ನ್ಯಾಯವಾದಿ ಆಸೀಫ್ ಅಲಿ, ರಜಾಕ್ ಉಸ್ತಾದ್, ಡಿ ಎಚ್ ಪೂಜಾರ, ಈಶಣ್ಣ ಕೊರ್ಲಳ್ಳಿ ಸೇರಿದಂತೆ ಮೊದಲಾದವರು ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.