ಕೊಪ್ಪಳ: ಕೊರೊನಾ ಸೋಂಕಿನ ಇಂತಹ ಸಂಕಷ್ಟದ ಸಮಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಬಾರದು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.
ಗಂಗಾವತಿಯಲ್ಲಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಸಿಎಂ ಬದಲಾವಣೆಗೆ ಕೆಲವರು ಯತ್ನಿಸುತ್ತಿದ್ದಾರೆ ಹಾಗೂ ಹೈಕಮಾಂಡ್ ಬಳಿ ಹೋಗಿದ್ದಾರೆ ಎಂಬ ವದಂತಿ ಇದೆ. ಹಿರಿಯರಾಗಲಿ ಅಥವಾ ಯಾರೇ ಆಗಲಿ ಈ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಮಾತನಾಡಬಾರದು. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಂಕಷ್ಟದ ಕಾಲದಲ್ಲಿ ಸಿಎಂ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕೊರೊನಾ ಸಂಕಷ್ಟವನ್ನು ಬಗೆಹರಿಸಬೇಕಾಗಿದೆ ಎಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಗ್ಗೆ ಹೈಕಮಾಂಡ್ಗೆ ಮಾಹಿತಿ ಇದೆ. ಈ ಬಗ್ಗೆ ನಮ್ಮ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಯಾರಿಗಾದರೂ ಏನಾದರೂ ಅಸಮಾಧಾನವಿದ್ದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ವಿಪಕ್ಷದವರು ಈಗ ಸಿಎಂ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು ಉಪ ಚುನಾವಣೆಯಲ್ಲಿ 14 ಸ್ಥಾನ ಬಿಜೆಪಿ ಗೆಲುವು ಸಾಧಿಸಿದೆ. ಇನ್ನೂ ಎರಡು ವರ್ಷ ಸುಮ್ಮನೆ ಇರಬೇಕು. ಎರಡು ವರ್ಷದ ಬಳಿಕ ಚುನಾವಣೆಯ ಮೂಲಕ ಜನರ ಬಳಿ ಹೋಗೋಣ. ಜನರು ನೀಡುವ ತೀರ್ಮಾನಕ್ಕೆ ಬದ್ದರಾಗಿರೋಣ. ಈಗ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.
ಓದಿ:Siddaramaiah: 'ಮೋದಿ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಿ'