ಮೈಕು ಹಿಡಿದು ಗಾಯಕರಾದ ಶಾಸಕ ಶಾಸಕ ಜಿ. ಜನಾರ್ದನರೆಡ್ಡಿ ಗಂಗಾವತಿ (ಕೊಪ್ಪಳ) : ಗಾಯನ ಎನ್ನುವ ಶಕ್ತಿಗೆ ಎಂಥ ವ್ಯಕ್ತಿಯನ್ನಾದರೂ ಸೆಳೆದುಕೊಳ್ಳುವ ಮಾಂತ್ರಿಕತೆ ಇದೆ. ಇಂತಹ ಗಾಯನ ಇದೀಗ ಗಂಗಾವತಿಯ ಶಾಸಕ ಜಿ.ಜನಾರ್ದನ ರೆಡ್ಡಿ ಅವರನ್ನು ಮೈಕು ಹಿಡಿದು ಹಾಡು ಹೇಳಿಸುವಂತೆ ಮಾಡಿದ್ದು, ಜನರ ಕುತೂಹಲಕ್ಕೆ ಕಾರಣವಾಯಿತು.
ನಗರದಲ್ಲಿಂದು ಖಾಸಗಿ ಕರೋಕೆ ಮೆಲೋಡೀಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕರನ್ನು ಹಿಂಬಾಲಕರು ಮತ್ತು ಅಭಿಮಾನಿಗಳು ಒಂದು ಹಾಡು ಹೇಳುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, "ಇಲ್ಲ ನನಗೆ ಹಾಡು ಹಾಡಲು ಬರುವುದಿಲ್ಲ. ಬೇಕಿದ್ದರೆ ಭಾಷಣ ಮಾಡುತ್ತೇನೆ" ಎಂದು ಹೇಳಿದರು. ಆದರೆ, ಪಟ್ಟುಬಿಡದ ಅಭಿಮಾನಿಗಳು ಭಾಷಣ ಸದಾಕಾಲ ಮಾಡುತ್ತೀರಿ. ಆದರೆ ಒಂದೇ ಒಂದು ಹಾಡು ಹಾಡುವಂತೆ ದುಂಬಾಲುಬಿದ್ದರು.
ಅಭಿಮಾನಿಗಳು ಮತ್ತು ಹಿಂಬಾಲಕರ ಅಭಿಮಾನಕ್ಕೆ ಮಣಿದ ರೆಡ್ಡಿ, ತನಗೆ ಬಂದ ಶೈಲಿಯಲ್ಲಿ ಹಾಡು ಹೇಳುವುದಾಗಿ ತಿಳಿಸಿದರು. ಈ ಜಗತ್ತು ನಡೆಯುತ್ತಿರುವುದು ಒಂದು ಹೊತ್ತಿನ ತುತ್ತಿನ ಚೀಲ ತುಂಬಿಸುವುದಕ್ಕಾಗಿ ಅಲ್ವಾ? ಅದಕ್ಕಾಗಿ ಅದೇ ಹಾಡನ್ನು ಹಾಡುತ್ತೇನೆ ಎಂದರು.
ರೆಡ್ಡಿ ಅವರಿಗೆ ಅದೇನನ್ನಿಸಿತೋ ಏನೋ, ಕನ್ನಡನಾಡಿನ ಹಿರಿಯ ನಟ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸಾಹಿತಿ ವೇಣುಗೋಪಾಲ ಕಾಸರಗೋಡು ಅವರ ಕಾದಂಬರಿ ಆಧಾರಿತ 'ಜಿಮ್ಮಿಗಲ್ಲು' ಎಂಬ ಸಿನಿಮಾದಿಂದ ಹಾಡೊಂದನ್ನು ಆಯ್ದುಕೊಂಡರು.
ಖುಷಿ ಅಲೆಯಲ್ಲಿ ತೇಲಿದ ಅಭಿಮಾನಿಗಳು: ಮೈಕು ಹಿಡಿದ ಶಾಸಕ ರೆಡ್ಡಿ, 'ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ' ಎಂಬ ಇಡೀ ಹಾಡು ಹಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ಖುಷಿಯ ಅಲೆಯಲ್ಲಿ ತೇಲಿಸಿದರು.
ಹಾಡು ಹಾಡುತ್ತ ಟಿಕೆಟ್ ನೀಡುವ ರಾಯಚೂರಿನ ಕಂಡಕ್ಟರ್:ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ಪ್ರತಿದಿನ ಲಕ್ಷಾಂತರ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಬಸ್ ಪ್ರಯಾಣಕ್ಕೆ ಕೆಲವು ಕಡೆ ಮಹಿಳಾ ಪ್ರಯಾಣಿಕರು ಮುಗಿಬೀಳುತ್ತಿರುವ ಹಿನ್ನೆಲೆಯಲ್ಲಿ ತಳ್ಳಾಟ, ನೂಕಾಟ ನಡೆದಿವೆ. ಇತ್ತೀಚಿಗೆ ಫ್ರೀ ಬಸ್ನಲ್ಲಿ ಸೀಟ್ಗಾಗಿ ಮಾರಾಮಾರಿ ನಡೆದಿರುವ ವಿಡಿಯೋಗಳು ಸಾಮಾಜಿಕ ಜಾಣತಾಣಗಳಲ್ಲಿ ವೈರಲ್ ಆಗಿದ್ದವು.
ರಾಯಚೂರಿನಲ್ಲಿ ಬಸ್ ಕಂಡಕ್ಟರ್ವೊಬ್ಬರು ಹಾಡು ಹಾಡುತ್ತಾ ಬಸ್ನಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ( ಜೂನ್ 24-2023) ಹರಿದಾಡಿತ್ತು. ಜಿಲ್ಲೆಯ ಎನ್ಇಕೆಎಸ್ಆರ್ಟಿಸಿಯಲ್ಲಿ ನಿರ್ವಾಹಕರಲ್ಲಿ ಜೂನಿಯರ್ ಡಾ. ರಾಜಕುಮಾರ್ ಎಂದೇ ಹೆಸರು ಪಡೆದಿರುವ ಅರಕೇರಾ ಗ್ರಾಮದ ಗುರು ದೇವರಮನಿ ಹಾಡು ಹಾಡುತ್ತಾ ಟಿಕೆಟ್ ಕೊಡುತ್ತಿದ್ದರು.
ಎಲ್ಲಾ ಅಕ್ಕ-ತಂಗಿಯರಿಗಾಗಿ, ತಂದೆ-ತಾಯಿಯವರಿಗಾಗಿ ಟಿಕೆಟ್ ಪ್ಲೀಸ್ ಎಂದು, ಎಲ್ಲಾದರು ಇರು ಎಂತಾದರೂ ಇರು, ಎಂದೆಂದಿಗು ನೀ ಫ್ರೀ ಬಸ್ ಪ್ರಯಾಣ ಮಾಡ್ತಿರು.. ಸಿದ್ದರಾಮಯ್ಯನವರು ತಂದಿರುವ ಸ್ತ್ರೀ ಶಕ್ತಿ ಯೋಜನೆ ಇದು ಎಂದು ಮನರಂಜನೆ ನೀಡಿದ್ದರು.
ಇದನ್ನೂ ಓದಿ:ಹಾಡು ಹಾಡುತ್ತ ಟಿಕೆಟ್ ನೀಡುವ ರಾಯಚೂರಿನ ಕಂಡಕ್ಟರ್.. ಮಹಿಳೆಯರು ಕಿಲ ಕಿಲ - ವಿಡಿಯೋ