ಗಂಗಾವತಿ (ಕೊಪ್ಪಳ) :ವಿಧಾನಸಭೆಯ ಕಲಾಪಗಳ ಹಿನ್ನೆಲೆ ಒಂದು ತಿಂಗಳು ಕ್ಷೇತ್ರದಿಂದ ದೂರವಿದ್ದ ಶಾಸಕ ಜಿ. ಜನಾರ್ದನ ರೆಡ್ಡಿ, ಬುಧವಾರ ಸಂಜೆ ಸುರಿಯುತ್ತಿದ್ದ ಜಡಿ ಮಳೆಯಲ್ಲಿಯೇ ಅಧಿಕಾರಿಗಳೊಂದಿಗೆ ಸಿಟಿ ರೌಂಡ್ ಹಾಕಿ ಸಮಸ್ಯೆಗಳನ್ನು ಆಲಿಸಿದ್ದಾರೆ. ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾಳೆ ಜುಲೈ 27 ರಂದು ಜಿಲ್ಲೆಯ ಶಾಲಾ - ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ ಸುಂದರೇಶ ಬಾಬು ಮುಂಜಾಗೃತ ಕ್ರಮವಾಗಿ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ನಗರದ ಇಂದಿರಾ ವೃತ್ತದಿಂದ ಪಾದಯಾತ್ರೆಯ ಮೂಲಕ ಆರಂಭವಾದ ಶಾಸಕರ ಸಿಟಿ ರೌಂಡ್, ದುರುಗಮ್ಮ ನಾಲಾದಿಂದ ಜುಲೈನಗರದ ವರೆಗೂ ಸಾಗಿತು. ಇಲ್ಲಿನ ಎರಡೂ ಬದಿ ರಸ್ತೆಗಳ ಮಧ್ಯೆ ಇರುವ ಆಳವಾದ ತಗ್ಗುಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುತ್ತಿರುವ ದೃಶ್ಯವನ್ನು ಗಮನಿಸಿದರು. ಈ ವೇಳೆ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರಿಗೆ ಸೂಚನೆ ನೀಡಿದರು. ತಕ್ಷಣಕ್ಕೆ ದುರಸ್ತಿ ಸಾಧ್ಯವಾಗದೇ ಹೋದರೆ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆ ಮಾಡಿಸಲು ತಿಳಿಸಿದರು.
ಗಂಗವಾತಿ ನಗರದ ಬೈಪಾಸ್ ರಸ್ತೆ ಮತ್ತು ಗೌಳಿ ಮಹದೇವಪ್ಪ ರೋಡ್ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ತೆರಳಿ ರಸ್ತೆ ವೀಕ್ಷಣೆ ಮಾಡಿದರು. ಬೈಪಾಸ್ ರಸ್ತೆ, ಮಹಾದೇವಪ್ಪ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮೊಣಕಾಲೆತ್ತರಕ್ಕೆ ರಸ್ತೆಯಲ್ಲಿ ತಗ್ಗು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣವೇ ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಜನಾರ್ದನ ರೆಡ್ಡಿ ಸೂಚನೆ ಕೊಟ್ಟರು.
ಪ್ರತಿ ಪಂಚಾಯಿತಿಗೆ ಒಂದು ಕೋಟಿ ಅನುದಾನ :ಗಂಗಾವತಿ ವಿಧಾನಸಭಾ ಕ್ಷೇತ್ರದ 11 ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ನನ್ನ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 1 ಕೋಟಿ ರೂ. ಮೊತ್ತದ ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ. ಕೆಆರ್ಪಿಪಿಗೆ ಜೀವ ಕೊಟ್ಟು ನನ್ನನ್ನು ಗೆಲ್ಲಿಸಿದ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಲಾಗಿದೆ. ಕ್ಷೇತ್ರದ ಯಾವೊಬ್ಬ ಸಾಮಾನ್ಯ ಪ್ರಜೆಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು.