ಕೊಪ್ಪಳ: ಕೃಷ್ಣಾ ಬಿ. ಸ್ಕೀಂ ಜಾರಿ ಕುರಿತಂತೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಧಿಕಾರವಿದ್ದ ಸಂದರ್ಭದಲ್ಲಿ ಏನೂ ಮಾಡದೆ ಈಗ ಅಧಿಕಾರವಿಲ್ಲದಾಗ ಏನೇನೋ ಮಾತನಾಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹಾಲಪ್ಪ ಆಚಾರ್ ನಗರದ ಪ್ರವಾಸಿ ಮಂದಿರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹಾಲಪ್ಪ ಆಚಾರ್ ರಾಯರೆಡ್ಡಿ ಹೆಸರನ್ನು ಹೇಳದೆ ದೂರಿದರು. ಬಳಿಕ ರಾಯರೆಡ್ಡಿ ಅವರ ಹೆಸರು ಹೇಳಿ ಅವರು ನೀರಾವರಿ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಆಗ್ರಹಿಸಿದರು.
ಕೊಪ್ಪಳ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದಾಗ ರಾಯರೆಡ್ಡಿ ಅವರು ಅಡ್ಡಗಲ್ಲು ಹಾಕಿದರು. ಬಳಿಕ ಅವರದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ದೊಡ್ಡದಾಗಿ ಪಾದಯಾತ್ರೆ ಮಾಡಿದರು. ನೀರಾವರಿ ಯೋಜನೆಗೆ ಹಣ ನೀಡಿದ್ದರೆ ನಮ್ಮ ನೀರಾವರಿ ಯೋಜನೆಗಳು ಪೂರ್ಣಗೊಳ್ಳುತ್ತಿದ್ದವು. ಆಗ ಅವರು ನೀರಾವರಿ ಯೋಜನಗೆ ಬೇಕಾದ ಕೆಲಸ ಮಾಡಲಿಲ್ಲ. ಈಗ ಚನಾವಣೆಯಲ್ಲಿ ರಾಯರೆಡ್ಡಿ ಸೋತ ಬಳಿಕ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಸೋಲಿನ ಹತಾಷೆಯಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂಷಿಸಿದರು.
ಕೊಪ್ಪಳ ಏತ ನೀರಾವರಿ ಯೋಜನೆಗಾಗಿ ಸತತವಾಗಿ ಶ್ರಮಿಸಿ ಈಗ ಕಾಮಗಾರಿ ಶುರು ಮಾಡಿದ್ದೇವೆ. ಒಟ್ಟು 1,729 ಕೋಟಿ ರುಪಾಯಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಯ ಅಗ್ರಿಮೆಂಟ್ ಆಗಿ ಕೆಲಸ ಪ್ರಾರಂಭವಾಗಲಿದೆ. ನೀರಾವರಿ ಯೋಜನೆಗಾಗಿ ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಕೃಷ್ಣ ಬಿ. ಸ್ಕೀಂ ವಿಷಯದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಅವರು ಸಹ ಋಣಾತ್ಮವಾಗಿ ಮಾತನಾಡಬಾರದು ಎಂದರು.
ಇನ್ನು ಕೃಷ್ಣ ಕೊಳ್ಳದ ಕುರಿತು ಆಂಧ್ರ ಮತ್ತು ತೆಲಂಗಾಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಇದನ್ನು ಇತ್ಯರ್ಥ ಮಾಡುವ ಪ್ರಯತ್ನ ಮಾಡುವಂತೆ ಸರ್ಕಾರದ ಮೇಲೆ ಉತ್ತರ ಕರ್ನಾಟಕದ ಶಾಸಕರನ್ನು ಜೊತೆಗೂಡಿಸಿಕೊಂಡು ಒತ್ತಡ ಹೇರುತ್ತೇನೆ. ಪ್ರಸಕ್ತ ಬಜೆಟ್ ಅಧಿವೇಶನದಲ್ಲಿಯೇ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಹಾಲಪ್ಪ ಆಚಾರ್ ಇದೇ ಸಂದರ್ಭದಲ್ಲಿ ಹೇಳಿದರು.