ಕುಷ್ಟಗಿ(ಕೊಪ್ಪಳ):ಪಟ್ಟಣದ 5ನೇ ವಾರ್ಡಿನಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬದ ಬದಲಿಗೆ ಬೇರೆ ಕಂಬ ಅಳವಡಿಸಲು ಮೌಖಿಕ ಸೂಚನೆಗೆ ಜಗ್ಗದ ಜೆಸ್ಕಾಂ ಅಧಿಕಾರಿಗಳನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ತರಾಟೆ ತೆಗೆದುಕೊಂಡರು.
ಕಳೆದ ಐದು ದಿನಗಳ ಹಿಂದೆ ಪಟ್ಟಣದಲ್ಲಿ ವಾಹನ ಡಿಕ್ಕಿ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಇದನ್ನು ಸರಿಪಡಿಸಲು ಸ್ಥಳೀಯ ಪುರಸಭೆ ಸದಸ್ಯ ಚಿಂರಂಜೀವಿ ಹಿರೇಮಠ ಜೆಸ್ಕಾಂ ಗಮನಕ್ಕೆ ತಂದರೂ ಸರಿಪಡಿಸಿರಲಿಲ್ಲ.
ನಂತರ ಶಾಸಕ ಬಯ್ಯಾಪೂರ ಗಮನಕ್ಕೆ ತಂದು ಸಂಬಂಧಿಸಿದ ಅಧಿಕಾರಿಗೆ ಮೌಖಿಕ ಸೂಚನೆ ನೀಡಲಾಗಿತ್ತು. ಆದಾಗ್ಯೂ ಜೆಸ್ಕಾಂ ವಿದ್ಯುತ್ ಕಂಬ ಅಳವಡಿಸದೇ ನಿರ್ಲಕ್ಷಿಸಿದ್ದರು.
ಇಂದು ಸದರಿ ವಾರ್ಡ್ ನಲ್ಲಿ ಸಿಸಿ ರಸ್ತೆಗೆ ಭೂಮಿ ಪೂಜೆಗೆ ಆಗಮಿಸಿದ ಸಂಧರ್ಭದಲ್ಲಿ ಸ್ಥಳೀಯರು ಶಾಸಕರ ಗಮನಕ್ಕೆ ತಂದರು. ಇದರಿಂದ ಸಿಟ್ಟಿಗೆದ್ದ ಶಾಸಕ ಬಯ್ಯಾಪೂರ, ಎಇಇ ಎಂ.ಪಿ. ಮಂಜುನಾಥ ಶಾಖಾಧಿಕಾರಿಯನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. ವಿದ್ಯುತ್ ಕಂಬ ಮುರಿದು ಬಿದ್ದಿರುವುದರಿಂದ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಕೂಡಲೇ ಸರಿಪಡಿಸಬೇಕೆಂದು ಸೂಚನೆ ನೀಡಿದರು.