ಗಂಗಾವತಿ (ಕೊಪ್ಪಳ) : ಇಲ್ಲಿನ ಉಪ ವಿಭಾಗ ಆಸ್ಪತ್ರೆಯು ಯಾವುದೇ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ರೋಗಿಗಳಿಗೆ ಸುಸಜ್ಜಿತ ಸೌಲಭ್ಯ ಕಲ್ಪಿಸುತ್ತಿದ್ದು ಇದೊಂದು ಮಾದರಿ ಆಸ್ಪತ್ರೆಯಾಗಿದೆ. ಗಂಗಾವತಿ ಮಾದರಿಯ ಆಸ್ಪತ್ರೆಯನ್ನು ದೆಹಲಿಯ ನನ್ನ ಕ್ಷೇತ್ರದಲ್ಲಿಯೂ ಅಳವಡಿಸಿಕೊಳ್ಳಲು ಯತ್ನಿಸುವುದಾಗಿ ದೆಹಲಿಯ ಲೋಂಡಾ ಕ್ಷೇತ್ರದ ಶಾಸಕ ಅಜಯ್ ಮಹಾರ್ ತಿಳಿಸಿದರು. ಉಪ ವಿಭಾಗ ಸರ್ಕಾರಿ ಆಸ್ಪತ್ರೆಯು ರಾಜ್ಯದಲ್ಲಿ ಸತತ ಮೂರನೇ ಬಾರಿಗೆ ಕೇಂದ್ರ ಸರ್ಕಾರ ನೀಡುವ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡ ಮಾಹಿತಿ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ, ಇಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಸವುಡಿ ಮಾತನಾಡಿ, ಇದು ರಾಜ್ಯ ಮಟ್ಟದಲ್ಲಿ ಸತತ ಮೂರು ಬಾರಿ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಆಸ್ಪತ್ರೆ. ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವೈದ್ಯರಿಗೆ ಸಹಜವಾಗಿ ಜಿಲ್ಲಾಸ್ಪತ್ರೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಆದರೆ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿರುವ ರಾಜ್ಯದ ಏಕೈಕ ಉಪ ವಿಭಾಗ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ. ಸ್ವಚ್ಛತೆ, ಸಹಜ ಹೆರಿಗೆ, ಅತಿ ಹೆಚ್ಚು ಒಪಿಡಿ ರೋಗಿಗಳು, ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳು ಅಂಕಿ-ಅಂಶ, ರಾಜ್ಯ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮಾನದಂಡದಲ್ಲಿ ಆಸ್ಪತ್ರೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ವಿವರಣೆ ನೀಡಿದರು.
1985ರಲ್ಲಿ ಆರಂಭ:1985ರಲ್ಲಿ ಕೇವಲ 30 ಬೆಡ್‌ಗಳೊಂದಿಗೆ ಶುರುವಾಗಿ 2004-05 ರಲ್ಲಿ ನೂರು ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿತು. ತಾಯಿ ಮತ್ತು ಮಗುವಿನ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇಡೀ ರಾಜ್ಯದಲ್ಲಿಯೇ ಅತಿಹೆಚ್ಚು ಸಹಜ ಹೆರಿಗೆ ಮಾಡುವ ಆಸ್ಪತ್ರೆಯಾಗಿ ಇದು ಗುರುತಿಸಿಕೊಂಡಿದೆ. ಮಾಸಿಕ 200 ರಿಂದ 250 ಹೆರಿಗೆ ಮಾಡಿಸಲಾಗುತ್ತಿದೆ. ರೋಗಿಗಳು ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಗಂಗಾವತಿ ಮಾತ್ರವಲ್ಲ, ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರದಿಂದ ರೋಗಿಗಳು ಬರುತ್ತಾರೆ. ಹೊಸಪೇಟೆ, ಬಳ್ಳಾರಿ, ಸಿಂಧನೂರು, ಮಾನ್ವಿ, ಲಿಂಗಸಗೂರು, ಗದಗ ಸೇರಿದಂತೆ ನೆರೆ-ಹೊರೆಯ ಜಿಲ್ಲೆಯಿಂದಲೂ ರೋಗಿಗಳು ಚಿಕಿತ್ಸೆಗಾಗಿ ಈ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಮಾಹಿತಿ ಒದಗಿಸಿದರು.