ಕೊಪ್ಪಳ:ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ನಾನು ಅಧಿಕಾರ ವಹಿಸಿಕೊಂಡ ಮೇಲೆ ಒಂದಿಷ್ಟು ಸಿಬ್ಬಂದಿಯ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ: ಸಚಿವ ಶಿವರಾಮ ಹೆಬ್ಬಾರ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಲ್ಲಿ ಕೆಲವೆಡೆ ಬಾಗಿಲು ತೆಗೆಯಲು ಸಹ ಸಿಬ್ಬಂದಿ ಇಲ್ಲದಂತಹ ಪರಿಸ್ಥಿತಿಯಿತ್ತು. ನಾನು ಅಧಿಕಾರ ವಹಿಸಿಕೊಂಡ ಮೇಲೆ ಇಎಸ್ಐ ಆಸ್ಪತ್ರೆಗಳಿಗೆ 153 ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದರು.
ಕೊಪ್ಪಳದಲ್ಲಿ ಇಎಸ್ಐ ಆಸ್ಪತ್ರೆಗೆ ಬೇಕಾದ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಕೊರೊನಾ ಎಲ್ಲರಿಗೂ ಸಂಕಷ್ಟ ತಂದೊಡ್ಡಿದೆ. ಕೋವಿಡ್ನಿಂದ ಸಂಕಷ್ಟಕ್ಕೊಳಗಾಗಿರುವ ಕ್ಷೌರಿಕರು ಹಾಗೂ ಧೋಬಿಗಳಿಗೆ 5 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಆಗಸ್ಟ್ 15ರವರೆಗೆ ಅವಧಿ ವಿಸ್ತರಿಸಲಾಗಿದೆ. ವಿಸ್ತರಣೆಯ ದಿನಾಂಕದವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕ್ಷೌರಿಕರಿಗೆ ಸರ್ಟಿಫಿಕೇಟ್ ನೀಡಿದರೂ ಅದನ್ನು ಪರಿಗಣಿಸಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ 2,329 ಕ್ಷೌರಿಕರು, 2,297 ಧೋಬಿಗಳು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ಅಧಿಕಾರಿಗಳು ಸಾರ್ವಜನಿಕರ ಕೆಲಸಕ್ಕೆ ಯಾವುದೇ ನೆಪ ಹೇಳುವಂತಿಲ್ಲ. ಕೊರೊನಾ ಜೊತೆ ಜೊತೆಗೆ ನಾವು ಕೆಲಸ ಮಾಡಬೇಕಿದೆ. ಕೊರೊನಾ ಇದೆ ಎಂದು ನೆಪ ಹೇಳಬಾರದು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಕಾರ್ಮಿಕರ ಗುರುತಿನ ಚೀಟಿ ರಿನಿವಲ್ ಆಗದೆ ಇರುವುದರಿಂದ ಪರಿಹಾರ ಹಣ ತಲುಪುವುದು ವಿಳಂಬವಾಗಿದೆ ಎಂದರು.