ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿರುವ ಪ್ರಕರಣ : ಮೃತರ ಗ್ರಾಮಗಳಿಗೆ ಸಚಿವ ಶಿವರಾಜ ತಂಗಡಗಿ ಭೇಟಿ, ಸಾಂತ್ವನ

ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಹಣವನ್ನು ಶಿವರಾಜ ತಂಗಡಗಿ ಘೋಷಣೆ ಮಾಡಿದರು.

ಸಚಿವ ಶಿವರಾಜ ತಂಗಡಗಿ
ಸಚಿವ ಶಿವರಾಜ ತಂಗಡಗಿ

By

Published : Jun 11, 2023, 7:19 PM IST

ಕೊಪ್ಪಳ : ಇತ್ತೀಚಿನ ದಿನಗಳಿಂದ ಕಲುಷಿತ ನೀರು ಕುಡಿದು ಕೊಪ್ಪಳ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ನಡೆದಿತ್ತು. ಈ ಸಂಬಂಧ ಭಾನುವಾರ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೃತರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿದರು. ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ನಿರ್ಮಲ ಮನೆಗೆ ಹಾಗೂ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ಹೊನ್ನಮ್ಮ ಹಾಗೂ ಶೃತಿ ಮನೆಗೆ ಭೇಟಿ ನೀಡಿದರು.

ಈ ಘಟನೆ ಕುರಿತು ಮಾತನಾಡಿದ ಶಿವರಾಜ ತಂಗಡಗಿ, ಕಳೆದ ಮೂರು ನಾಲ್ಕು ದಿನಗಳಿಂದ ನಡೆದಿರುವ ಈ ಘಟನೆಗಳ ಬಗ್ಗೆ ಹೇಳಿದಾಗ ನಾನು ಬೆಂಗಳೂರಿನಲ್ಲಿ ಇದ್ದೆ. ಹೀಗಾಗಿ ಇಂದು ಎಲ್ಲಾ ಅಧಿಕಾರಿಗಳನ್ನು ಕರೆದುಕೊಂಡು ಬಂದಿದ್ದೇನೆ. ಜೆಜೆಎಂ ಕಾಮಗಾರಿಯ ನೀರು ಪೈಪ್ ಲೈನ್​ಗೆ ಕೊಳಚೆ ನೀರು ಸೇರಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಆದ್ದರಿಂದ ಕಲುಷಿತ ನೀರು ಪ್ರಕರಣದಲ್ಲಿ ಸಾವಿನ ಕಾರಣದ ಬಗ್ಗೆ ತನಿಖೆ ಮಾಡಲಾಗುವುದು. ತಪ್ಪಿತಸ್ಥ ಅಧಿಕಾರಿಗಳು ಹಾಗು ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಣೆ ಮಾಡಿದ ಶಿವರಾಜ ತಂಗಡ, ಬಿಜಕಲ್ ಗ್ರಾಮದಲ್ಲಿ ಇಂದು ಸಹ 6 ಹೊಸ ವಾಂತಿ ಬೇಧಿ ಪ್ರಕರಣಗಳು ವರದಿಯಾಗಿದ್ದು, ವಾಂತಿ ಬೇಧಿ ಸಂಪೂರ್ಣವಾಗಿ ನಿಲ್ಲುವವರೆಗೂ ಮತ್ತು ನಂತರವೂ ಕೆಲವು ದಿನಗಳವರೆಗೆ ವೈದ್ಯಕೀಯ ಸೇವೆ ಮುಂದುವರೆಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಮೇ 29 ರಂದು ಕಲುಷಿತ ನೀರು ಕುಡಿದು 25 ಜನ ಅಸ್ವಸ್ಥಗೊಂಡಿರುವ ಮತ್ತೊಂದು ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ ಬೆಳಕಿಗೆ ಬಂದಿತ್ತು. ವಾಂತಿ, ಬೇಧಿಯಿಂದ ಗೊರೆಬಾಳದಲ್ಲಿ ಮೂವರು ತೀವ್ರ ಅಸ್ವಸ್ಥಗೊಂಡಿದ್ದರು. ಅಸ್ವಸ್ಥರನ್ನು ಲಿಂಗಸುಗೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಮೆಡಿಕಲ್ ಕ್ಯಾಂಪ್ ಹಾಕಿ ಸ್ಥಳದಲ್ಲಿಯೇ ಬೀಡುಬಿಟ್ಟು ಪರಿಸ್ಥಿತಿ ನಿಭಾಯಿಸುವಲ್ಲಿ ಶ್ರಮಿಸಿತ್ತು.

ಕುಡಿಯುವ ನೀರು ಸರಬರಾಜು ಪೈಪ್‌ಗೆ ಚರಂಡಿ ನೀರು ಸೇರಿ ಅವಾಂತರ ಸೃಷ್ಟಿಯಾಗಿದೆ ಎಂಬ ಮಾಹಿತಿ ಆಗ ಹೊರ ಬಿದ್ದಿತ್ತು. ಬೋರ್‌ವೆಲ್​​ನಿಂದ ನೀರು ಸರಬರಾಜು ಮಾಡುವ ಪೈಪ್ ಡ್ಯಾಮೇಜ್ ಆಗಿ ಕಲುಷಿತ ನೀರು ಸರಬರಾಜು ಆಗಿತ್ತು. ಈ ನೀರು ಸೇವಿಸಿ ಜನರು ಅಸ್ವಸ್ಥಗೊಂಡಿದ್ದರು ಎಂದು ಗ್ರಾಮಸ್ಥರು ಈ ಘಟನೆ ಬಳಿಕ ತಿಳಿಸಿದ್ದರು. ಅಲ್ಲದೆ ಈ ಬಗ್ಗೆ ಗ್ರಾಮದ ಕೆಲ ಯುವಕರು ಪಂಚಾಯಿತಿ ಸಿಬ್ಬಂದಿಗಳ ಗಮನಕ್ಕೆ ತಂದರೂ ಅಲಕ್ಷ್ಯವಹಿಸಿದ್ದಾರೆ. ಹಾಗು ಅಸ್ವಸ್ಥಗೊಂಡಿದ್ದ ಜನರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಿಬ್ಬಂದಿ ತೀವ್ರ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಯುವಕರು ಆರೋಪಿಸಿದ್ದು, ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ :ಕಲುಷಿತ ನೀರು ಸೇವಿಸಿ ವೃದ್ಧೆ ಸಾವು: 15 ಜನ ಅಸ್ವಸ್ಥ

ABOUT THE AUTHOR

...view details