ಕೊಪ್ಪಳ : ರಾಜ್ಯದಲ್ಲಿ ಈ ಹಿಂದೆ ಆಡಳಿತ ಮಾಡಿದ ಬಿಜೆಪಿ 40% ಸರಕಾರ ಎಂದು ಹೆಸರು ಪಡೆದು ರಾಜ್ಯದ ಮಾನ ಮರ್ಯಾದೆ ತೆಗೆದಿದೆ. ಅವರು ಆಡಳಿತದಲ್ಲಿ ಇರುವಾಗಲೇ ಪಿಎಸ್ಐ ಹಗರಣ ರಾಜ್ಯದಲ್ಲಿ ದೊಡ್ಡ ಸುದ್ದಿಯಾಯಿತು. ಪ್ರಕರಣದಲ್ಲಿ ಕೇವಲ ಒಬ್ಬ ಐಪಿಎಸ್ ಅಧಿಕಾರಿಯನ್ನು ಮಾತ್ರ ಅರೆಸ್ಟ್ ಮಾಡಲಾಯಿತು. ಅದನ್ನು ಹೊರತುಪಡಿಸಿದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿದ್ದಾರೆ ಎಂಬುದನ್ನು ತನಿಖೆ ಮಾಡಲಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಂದು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರದ ಹಗರಣಗಳನ್ನು ನಾವು ತನಿಖೆ ಮಾಡಿಸದೇ ಇದ್ದರೆ ಯುವಜನತೆಗೆ ಮೋಸ ಮಾಡಿದಂತೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ವಿರೋಧ ಪಕ್ಷದ ನಾಯಕರಾಗಿದ್ದರು. ಅಂದು ಬಿಜೆಪಿ ಮಾಡಿದ ಎಲ್ಲ ಹಗರಣಗಳನ್ನೂ ಪ್ರಸ್ತಾಪಿಸಿ ವಿರೋಧಿಸಿದ್ದರು. ಈಗ ನಾವು ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದೇವೆ, ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ. ಪಿಎಸ್ಐ ಹಗರಣದಲ್ಲಿ ಅಂದಿನ ಶಾಸಕರೊಬ್ಬರು ಹಣ ಪಡೆದು ಸರ್ಕಾರಕ್ಕೆ ಕೊಟ್ಟಿದ್ದೇನೆ ಎಂದು ಹೇಳಿದ್ದರು. ಅವರಿಗೆ ಒಂದು ನೋಟೀಸ್ ಕೊಡುವ ಕೆಲಸವೂ ಆಗಿಲಿಲ್ಲ ಎಂದು ತಂಗಡಗಿ ಟೀಕಿಸಿದರು.
ದ್ವೇಷದ ರಾಜಕಾರಣ ಬಿಡಬೇಕು: ಬಿಜೆಪಿಯವರು ದ್ವೇಷದ ರಾಜಕಾರಣದ ಮೂಲಕ ಬಂದಿದ್ದಾರೆ. ನಾವು ಪ್ರೀತಿ, ವಿಶ್ವಾಸದ ರಾಜಕಾರಣ ಮಾಡಿದ್ದೇವೆ. ಪ್ರತಿ ಜಾತಿ ಜನಾಂಗದವರೊಂದಿಗೆ ಪ್ರೀತಿ, ವಿಶ್ವಾಸದ ರಾಜಕಾರಣ ಮಾಡುತ್ತಾ ಬಂದಿದ್ದೇವೆ. ಹಾಗಾಗಿ ರಾಜ್ಯದ ಜನರು ಕೋಮುವಾದಿಗಳನ್ನು ಮನೆಗೆ ಕಳುಹಿಸಿ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದ ರೀತಿ ಆಡಳಿತ ಮಾಡುತ್ತೇವೆ ಎಂದು ಭರವಸೆ ನೀಡಿದರು.