ಕೊಪ್ಪಳ: ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಬುದ್ಧಿ ಭ್ರಮಣೆ ಆಗಿದ್ದು, ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಅವರು ಮಲ್ಲಿಕಾರ್ಜುನ ಖರ್ಗೆ ಕುರಿತು ಆರಗ ಜ್ಞಾನೇಂದ್ರ ನೀಡಿದ್ದ ಹೇಳಿಕೆ ವಿರುದ್ಧ ಗುಡುಗಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೋದಿ ಉಪನಾಮ ಹೇಳಿದ್ದಕ್ಕೆ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಲಾಯಿತು. ಆದರೆ ಈಗ ಆರಗ ಜ್ಞಾನೇಂದ್ರ ಅವರು ಖರ್ಗೆ ಅವರಿಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ಕಲ್ಯಾಣ ಕರ್ನಾಟಕದ ಜನ ಈ ಭಾಗವನ್ನು ಬಿಜೆಪಿ ಮುಕ್ತ ಮಾಡಬೇಕು" ಎಂದು ಕರೆ ನೀಡಿದರು.
"ಕಲ್ಯಾಣ ಕರ್ನಾಟಕದ ಜನರಿಗೆ ಅರಣ್ಯ ಸಚಿವರಾಗುವ ಯೋಗ್ಯತೆ ಇಲ್ಲವಾ? ಖರ್ಗೆ ಅವರು ಆಗಿನ ಹೈದರಾಬಾದ್ ಕರ್ನಾಟಕಕ್ಕೆ 371ಜೆ ಸ್ಥಾನಮಾನ ನೀಡಿ ಈ ಭಾಗವನ್ನು ಕಲ್ಯಾಣ ಕರ್ನಾಟಕವನ್ನಾಗಿ ಮಾಡಿದ್ದಾರೆ. ಅವರ ಮೈ ಬಣ್ಣದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಈ ಮೂಲಕ ಖರ್ಗೆ ಅವರನ್ನಷ್ಟೇ ಆರಗ ಜ್ಞಾನೇಂದ್ರ ಅಪಮಾನ ಮಾಡಿಲ್ಲ, ಇಡೀ ಉತ್ತರ ಕರ್ನಾಟಕದ ಜನರನ್ನು ಅಪಮಾನ ಮಾಡಿ ಮಾತನಾಡಿದ್ದಾರೆ. ಹಾಗಾಗಿ ಬಿಜೆಪಿಗರೇ, ಈ ಭಾಗದ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಕಿಡಿಕಾರಿದರು.
ಲೋಕಸಭೆಗೆ ಸ್ಪರ್ಧಿಸಲ್ಲ.. "ಯಾವ ಶಾಸಕರು, ಮಂತ್ರಿಗಳು ಲೋಕಸಭೆಗೆ ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ಹೇಳಿಲ್ಲ. ಈ ಬಗ್ಗೆ ದೆಹಲಿ ಸಭೆಯಲ್ಲಿ ಚರ್ಚೆ ಆಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ನನಗೆ ಪಕ್ಷದಿಂದ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಸ್ಪರ್ಧೆ ಮಾಡುವ ಪ್ರಶ್ನೆ ಇಲ್ಲ. ಒಂದು ವೇಳೆ ಪಕ್ಷ ಸ್ಪರ್ಧೆ ಮಾಡುವಂತೆ ಸೂಚಿಸಿದರೆ ಅದನ್ನು ಪಾಲಿಸಬೇಕಾಗುತ್ತದೆ" ಎಂದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅವರು ಸ್ಪಷ್ಟಪಡಿಸಿದರು.