ಕೊಪ್ಪಳ: ಬೊಮ್ಮಾಯಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಸಿದ್ದರಾಮಯ್ಯ ತಮ್ಮ ಬಾಯಿ ಚಪಲಕ್ಕೆ ಹೇಳುತ್ತಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಚಿವ ಹಾಲಪ್ಪ ಆಚಾರ್ ಹೇಳಿಕೆ ನೀಡಿರುವುದು.. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೆಹರೂ ಬಗ್ಗೆ ಸಿ ಟಿ ರವಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ನೆಹರೂ ಬಗೆಗಿನ ಸಿಟಿ ರವಿ ಅವರ ಹೇಳಿಕೆ ಅವರ ವೈಯಕ್ತಿಕ, ಅದು ಸರ್ಕಾರ ಮತ್ತು ಪಕ್ಷದ ಹೇಳಿಕೆಯಲ್ಲ ಎಂದ್ರು.
ಇನ್ನು, ವಾಜಪೇಯಿ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆ ಅವರ ಬಾಲಿಶತನ ತೋರಿಸುತ್ತಿದೆ. ರಾಷ್ಟ್ರದ ಜನರು ಗೌರವಿಸುವವರ ಬಗ್ಗೆ ಹೇಳಿರುವುದು ಅವರ ಸಣ್ಣ ಮನಸ್ಸು ತೋರಿಸುತ್ತದೆ ಎಂದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಮೇಕೆದಾಟು ಹೋರಾಟದಲ್ಲಿ ಭಾಗಿಯಾದವರು. ಹೀಗಾಗಿ, ಸೌಹಾರ್ದಯುತವಾಗಿ ವಿವಾದ ಬಗೆಹರಿಸಿ ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
75ನೇ ಸ್ವಾತಂತ್ರ್ಯ ದಿನಾಚರಣೆ :75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೊಪ್ಪಳದಲ್ಲಿಯೂ ಸಂಭ್ರಮದಿಂದ ಆಚರಿಸಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಅಲಂಕೃತ ತೆರೆದ ವಾಹನದಲ್ಲಿ ಪೊಲೀಸ್, ಗೃಹ ರಕ್ಷಕದಳ, ಎನ್ಸಿಸಿ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿ ವಿವಿಧ ತಂಡಗಳ ಪರೇಡ್ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು.
75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಕೆ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.