ಕೊಪ್ಪಳ:ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆಗಳು ನಡೆದಿಲ್ಲವೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಚರ್ಚೆ ಯಾಕೆ ಬರುತ್ತೋ ಗೊತ್ತಿಲ್ಲ. ಈಗಂತೂ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮತ್ತೊಂದೆಡೆ ಸಚಿವ ಉಮೇಶ ಕತ್ತಿ ಪ್ರತ್ಯೇಕ ಸಭೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅವರು ತಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಸೇರಿದ್ದಾರೆ. ನಾವು ಇಂದು ಸಂಸದ ಸಂಗಣ್ಣ ಕರಡಿ, ಶಾಸಕ ಬಸವರಾಜ ದಡೇಸೂಗೂರು ಸೇರಿದ್ದೆವು. ಹಾಗಂತ ಪ್ರತ್ಯೇಕವಾಗಿ ಸಭೆ ನಡೆಸಿದ್ದೇವೆ ಎಂದಲ್ಲ. ಆಗಾಗ ಸಭೆ ನಡೆಸುತ್ತಾರೆ. ಅಂತಹ ಕಡೆ ನಾನೂ ಹೋಗಿರುತ್ತೇನೆ. ಇದಕ್ಕೆ ಬೇರೆ ಅರ್ಥವಿಲ್ಲ ಎಂದು ಹೇಳಿದರು.