ಕೊಪ್ಪಳ: 40 ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷದವರು ಬರೀ ಕಥೆ ಹೇಳುತ್ತಾರೆ. ಅವರು ಅಧಿಕಾರ ಕಳೆದುಕೊಂಡಾಗಿನಿಂದಲೂ ಹೀಗೆಯೇ ಹೇಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಲಿದೆ. ಮುಂದೆಯೂ ಸಹ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಉಪಚುನಾವಣೆಯನ್ನು ನಾವು ಒಗ್ಗಟ್ಟಾಗಿ ಎದುರಿಸಲಿದ್ದೇವೆ ಎಂದರು.
ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೊಸ ಮರಳು ನೀತಿ ಜಾರಿ ಮಾಡಲಾಗುತ್ತದೆ. ಹಟ್ಟಿ ಗೋಲ್ಡ್ ಮೈನಿಂಗ್ ಕಂಪನಿಗೆ ಮರಳು ಟೆಂಡರ್ ನೀಡಲಾಗಿದೆ. ಸಾಮಾನ್ಯ ಜನರಿಗೆ ಇದರಿಂದ ಕಡಿಮೆ ದರದಲ್ಲಿ ಮರಳು ಸಿಗಲಿದೆ. ರಾಜ್ಯದಲ್ಲಿ ಬೇಡಿಕೆಗಿಂತ ಮರಳು ಕಡಿಮೆ ಇದೆ. ಇದನ್ನು ಸರಿದೂಗಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಶಾಸಕರ ಮೇಲೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ತಂಗಡಗಿ ಅವರದ್ದು ಬರೀ ಹಿಟ್ ಅಂಡ್ ರನ್ ಹೇಳಿಕೆ. ಸಮರ್ಪಕ ದಾಖಲೆ ಇದ್ದರೆ ಬಿಡುಗಡೆ ಮಾಡಿ ಮಾತನಾಡಲಿ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಪೊಲೀಸ್ ಠಾಣೆಗಳನ್ನು ಬಿಜೆಪಿ ಕಚೇರಿ ಅನ್ನೋ ತಂಗಡಗಿ ಮಾತು ಸುಳ್ಳು. ತಮ್ಮ ಹತ್ತಿರ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಓದಿ:ಟಾಟಾ ಸಂಸ್ಥೆಯಿಂದ ಕೃಷಿ ಸಂಶೋಧನೆ, ನಾವಿನ್ಯತಾ ಕೇಂದ್ರ ಪ್ರಾರಂಭಕ್ಕೆ ಉತ್ಸುಕತೆ