ಕೊಪ್ಪಳ :ಕೆಲಸ ಮಾಡದ ಅಧಿಕಾರಿಗಳು ನಿಮ್ಮ ನಿಮ್ಮ ದಾರಿ ನೋಡಿಕೊಳ್ಳಿ ಎಂದು ನೂತನ ಸಚಿವ ಹಾಲಪ್ಪ ಆಚಾರ್ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕೋವಿಡ್ ಮುಂಜಾಗ್ರತಾ ಕ್ರಮಗಳ ಕುರಿತು ಸಭೆ ನಡೆಸಿ ಅಧಿಕಾರಿಗಳಿಗೆ ವಾರ್ನ್ ಮಾಡಿದರು.
ಸಚಿವ ಹಾಲಪ್ಪ ಆಚಾರ್ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ.. ಸರ್ಕಾರ ಮತ್ತು ಜನರು ನಮಗೆ ಜವಾಬ್ದಾರಿ ನೀಡಿ ಇಲ್ಲಿಗೆ ಕಳಿಸಿದ್ದಾರೆ. ಹಿಂದೆ ಏನಾಗಿದೆಯೋ ನನಗೆ ಗೊತ್ತಿಲ್ಲ. ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಎಂದು ಆದೇಶಿಸಿದರು.
ನಾನು ನಿಮಗೆ ಒತ್ತಡ ಹಾಕುತ್ತೇನೆ ಎಂದಲ್ಲ. ಕಾನೂನು ಬಾಹಿರವಾಗಿ ಕೆಲಸ ಮಾಡಿ ಎಂದು ಹೇಳುವುದಿಲ್ಲ. ಜಿಲ್ಲೆಯ ಮತ್ತು ಇಲಾಖೆಯ ಅಭಿವೃದ್ಧಿಗಾಗಿ ಉತ್ತಮ ಕೆಲಸ ಮಾಡಬೇಕು. ಒಂದು ವೇಳೆ ಯಾರಿಗಾದರೂ ಕೆಲಸ ಮಾಡಲು ಆಗುವುದಿಲ್ಲ ಎಂದರೆ ಅಂತಹವರು ನಿಮ್ಮ ನಿಮ್ಮ ದಾರಿ ನೋಡಿಕೊಳ್ಳಿ ಎಂದು ಸಚಿವರು ಎಚ್ಚರಿಸಿದರು.
ಸಭೆಯಲ್ಲಿ ಶಾಸಕರಾದ ಪರಣ್ಣ ಮುನವಳ್ಳಿ, ಕೆ. ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಪಾಟೀಲ್ ಭಯ್ಯಾಪೂರ, ಬಸವರಾಜ ದಡೇಸೂಗೂರ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ :ಯಾವುದೇ ಇಲಾಖೆಯ ಅಧಿಕಾರಿಗಳು ಮೊದಲು ಕೆಲಸ ಮಾಡಬೇಕು. ನಾಲ್ಕು ದಿನಗಳಿಗಿಂತ ಹೆಚ್ಚಿನ ದಿನ ಫೈಲ್ ಇಟ್ಟುಕೊಳ್ಳಬಾರದು. ಕೆಲಸ ಮಾಡಲು ಅಸಡ್ಡೆ ತೋರಿದರೆ ಇಲ್ಲಿಂದ ಮೊದಲು ಜಾಗ ಖಾಲಿ ಮಾಡಿ ಎಂದು ಸಚಿವರು ಖಡಕ್ ವಾರ್ನಿಂಗ್ ಮಾಡಿದರು.
ಗಣಿ ಮತ್ತು ಭೂ ವಿಜ್ಞಾನ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಮಾತನಾಡಿರುವುದು.. ಅಧಿಕಾರಿಗಳೊಂದಿಗೆ ನಡೆಸಿದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ನಮ್ಮನ್ನು ನಂಬಿ ಕೆಲಸ ಮಾಡಲು ಖಾತೆಗಳನ್ನು ಹಾಗೂ ಸಚಿವ ಸ್ಥಾನ ನೀಡಿದೆ. ಇದಕ್ಕೆ ಅಧಿಕಾರಿಗಳೂ ಸಹ ಸ್ಪಂದಿಸಬೇಕು. ಯಾವುದೇ ಕುಂಟು ನೆಪ ಹೇಳದೆ ಭ್ರಷ್ಟಾಚಾರವಿಲ್ಲದ ಆಡಳಿತ ನೀಡಬೇಕು. ಯಾರಿಂದಲೂ ದೂರುಗಳು ಬಾರದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ 3ನೇ ಅಲೆ ಬರುವ ಸಾಧ್ಯತೆ ಇದೆ. ಹೀಗಾಗಿ, ಈಗಾಗಲೇ ಆಕ್ಸಿಜನ್ ಘಟಕಗಳು, ಮಕ್ಕಳ ತಜ್ಞರು ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಿದ್ಧವಾಗಬೇಕು. ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಮುಂದಿನ ಶ್ರಾವಣದೊಳಗಾಗಿ ಪೂರ್ಣಗೊಳಿಸಲಾಗುವುದು.
ನವಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ನೆನಗುದಿಗೆ ಬಿದ್ದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.