ಕೇಂದ್ರ ಸಚಿವ ಭಗವಂತ ಖೂಬಾ ಮಾಧ್ಯಮ ಪ್ರತಿಕ್ರಿಯೆ ಕೊಪ್ಪಳ:ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಕಾಂಗ್ರೆಸ್ನವರು ಲೂಟಿ ಹೊಡೆದು ಬೇರೆ ರಾಜ್ಯಗಳಿಗೆ ಹಣ ಸಾಗಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ. ಕೊಪ್ಪಳದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಮಾನ-ಮರ್ಯಾದೆ ಇದ್ದರೆ ಮೊದಲು ಅಧಿಕಾರದಿಂದ ಕೆಳಗಿಳಿಯಬೇಕು. ಸರಕಾರ ರೈತರಿಗೆ ಸರಿಯಾದ ವಿದ್ಯುತ್ ಪೂರೈಸುತ್ತಿಲ್ಲ. ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬರ ಘೋಷಣೆ ಮಾಡಿದ್ದರೂ ರೈತರಿಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ಐದು ತಿಂಗಳಲ್ಲಿ ರಾಜ್ಯ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ನಾಚಿಕೆಯಾಗಬೇಕು ಎಂದು ಹರಿಹಾಯ್ದರು.
ಇದೇ ವೇಳೆ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಬಂದಾಗ ರಾಜ್ಯದ ಬೊಕ್ಕಸದಿಂದ ಜನರಿಗೆ ಪರಿಹಾರ ನೀಡಿದ್ದರು. ಅದರಂತೆ ಕಾಂಗ್ರೆಸ್ ಸರಕಾರವೂ ರೈತರಿಗೆ ಪರಿಹಾರ ನೀಡಿ ಆಮೇಲೆ ಕೇಂದ್ರದಿಂದ ಪಡೆದುಕೊಳ್ಳಲಿ ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಎಫ್ಐಆರ್ ದಾಖಲು ವಿಚಾರಕ್ಕೆ ಪ್ರತ್ರಿಕ್ರಿಯಿಸಿ, ಎಫ್‌ಐಆರ್ ದಾಖಲು ಆಗಿದ್ದರೆ ಅದು ಕಾಂಗ್ರೆಸ್ ಸರ್ಕಾರದ ಷಡ್ಯಂತ್ರ. 2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದೀವಿ ಎಂಬ ಅಹಂಕಾರದ ಪ್ರತಿಬಿಂಬ. ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕುತಂತ್ರಿ ಸರ್ಕಾರ. ಇವರ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಬರುವ ಲೋಕಸಭೆಗೆ ಕಾಂಗ್ರೆಸ್‌ಗೆ ಎಲ್ಲಿಯೂ ನೆಲೆ ಸಿಗುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ವಿಚಾರ:ಅವರಿಗೆ ದೇವರು ಒಳ್ಳೆದು ಮಾಡಲಿ. ಬಿಜೆಪಿಯವರು ಯಾರೂ ಕಾಂಗ್ರೆಸ್‌ಗೆ ಹೋಗೋದಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಅವಕಾಶ ಕೊಡುವ ಪಕ್ಷ ಅಂದರೆ ಅದು ಬಿಜೆಪಿ. ಹಾಗಾಗಿ ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ: ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ- ಸಲೀಂ ಅಹ್ಮದ್