ಕೊಪ್ಪಳ: ಬೆಳಗಾವಿಯಲ್ಲಿ ಯಾರೋ ಪುಂಡಪೋಕರಿಗಳು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಗಲಾಟೆ ಮಾಡಿದರೆ ರಾಜ್ಯದಲ್ಲಿರುವ ಇಡೀ ಮರಾಠ ಸಮುದಾಯವನ್ನು ಹೊರಹಾಕಲು ಆಗುವುದಿಲ್ಲ. ರಾಜ್ಯ ಸರ್ಕಾರ ಮರಾಠ ಜನರ ಅಭಿವೃದ್ಧಿ ನಿಗಮ ರಚನೆ ಮಾಡಿರುವುದು ಸರಿಯಾಗಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ರಚನೆ: ಸಮರ್ಥಿಸಿಕೊಂಡ ಸಚಿವ ಬಿ.ಸಿ ಪಾಟೀಲ್ ನಗರದಲ್ಲಿ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ರಾಜ್ಯ ಸರ್ಕಾರ ಮರಾಠ ಜನರ ಅಭಿವೃದ್ಧಿಗೆ ನಿಗಮ ಸ್ಥಾಪಿಸಿದೆಯೇ ಹೊರತು ಮರಾಠ ಭಾಷೆಯ ಅಭಿವೃದ್ದಿಗೆ ಅಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿರುವ ಮರಾಠ ಸಮುದಾಯದಲ್ಲಿಯೂ ಬಡವರು, ನಿರ್ಗತಿಕರು ಇದ್ದಾರೆ. ಅಂತಹ ಜನರ ಏಳಿಗೆಗಾಗಿ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರಿಯಾದ ನಿರ್ಧಾರ ತೆಗೆದುಕೊಂಡಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಈಗಾಗಲೇ ಅನೇಕ ಸಮುದಾಯಗಳ ಅಭಿವೃದ್ದಿಗೆ ನಿಮಗ ಸ್ಥಾಪಿಸಲಾಗಿದೆ. ಅದರಂತೆ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪಿಸಿದರೂ ಸ್ವಾಗತಿಸುತ್ತೇನೆ. ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿರುವುದರ ಹಿಂದೆ ಬಸವಕಲ್ಯಾಣ ಚುನಾವಣೆ ದೃಷ್ಠಿಕೋನ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ. ಬಸವಕಲ್ಯಾಣ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಶಿರಾದಂತಹ ಚುನಾವಣೆಯನ್ನೇ ಗೆದ್ದಿದ್ದೇವೆ. ಬಸವಕಲ್ಯಾಣದಲ್ಲಿ ಜನರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಬಸವಕಲ್ಯಾಣದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಶಿವರಾಜ ತಂಗಡಗಿ ಅವರನ್ನು ತೃಪ್ತಿಪಡಿಸಲು ಇಡೀ ಚುನಾವಣೆ ವ್ಯವಸ್ಥೆಯನ್ನು ಬದಲಾಯಿಸುವ ಅವಶ್ಯಕತೆ ಇಲ್ಲ. ಇವಿಎಂ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಗೆದ್ದೇ ಇಲ್ಲವಾ? ಇತ್ತೀಚಿಗೆ ನಡೆದ ಬಿಹಾರ ಚುನಾವಣೆಯಲ್ಲಿ 25 ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಅಲ್ಲಿ ಇವಿಎಂ ಇರಲಿಲ್ಲವಾ? ಕುಣಿಯೋಕೆ ಬರದವರು ನೆಲ ಡೊಂಕು ಅಂತಾರೆ. ಕಾಂಗ್ರೆಸ್ ಪಕ್ಷ ತನ್ನ ಸ್ವಂತಿಕೆ ಕಳೆದುಕೊಂಡಿದೆ. ತನ್ನ ಕಾಲಮೇಲೆ ನಿಲ್ಲುವ ಶಕ್ತಿ ಕಳೆದುಕೊಂಡಿದೆ. ಸೋಲಿಗೆ ಯಾರನ್ನಾದರೂ ಹೊಣೆ ಮಾಡೋದು, ಇಲ್ಲ ಇವಿಎಂ ಮೇಲೆ ಹಾಕೋದು. ಜನರ ತೀರ್ಮಾನ ಅಂತಿಮ. ತಾವು ಗೆದ್ದರೆ ಸರಿಯಾಗಿರುತ್ತೆ, ಸೋತರೆ ಇವಿಎಂ ಸರಿ ಇಲ್ಲ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ ಎಂದರು.
ಇನ್ನು ಸಚಿವ ಸಂಪುಟ ವಿಸ್ತರಣೆ, ಸೇರ್ಪಡೆ ಮಾಡಿಕೊಳ್ಳುವುದು ಸಿಎಂ ಹಾಗೂ ಪಕ್ಷದ ವರಿಷ್ಠರ ನಿರ್ಧಾರ ಎಂದು ಇದೇ ಸಂದರ್ಭದಲ್ಲಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.