ಕೊಪ್ಪಳ : ಬೇವಿನ ಮರದಿಂದ ಹಾಲು ಜಿನುಗುತ್ತಿದ್ದು, ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಮರಕ್ಕೆ ಪೂಜೆ ಸಲ್ಲಿಸುತ್ತಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ನಡೆದಿದೆ.
ಬೇವಿನ ಮರದಿಂದ ಹಾಲು ಬಂತೆಂದು ವಿಶೇಷ ಪೂಜೆ, ಅನ್ನದಾನ ಬೇವಿನ ಮರದಿಂದ ಹಾಲಿನ ರೂಪದ ಬಿಳಿ ದ್ರವ ಜಿನುಗುತ್ತಿರುವುದನ್ನು ಜನತೆ ಪವಾಡವೆಂದೇ ನಂಬುತ್ತಿದ್ದಾರೆ. ಬಿಜಕಲ್ ಗ್ರಾಮದ ಗೋಪಾಲರಾವ್ ದೇಸಾಯಿ ಎಂಬುವರ ಹೊಲದಲ್ಲಿ ಇರುವ ಗದ್ದಿ ದ್ಯಾಮಮ್ಮ ಎಂದು ಕರೆಯುವ ದೊಡ್ಡ ಬೇವಿನ ಮರದಿಂದ ಕಳೆದ ಒಂದು ವಾರದಿಂದ ಬಿಳಿ ಹಾಲಿನ ರೂಪದ ದ್ರವ ಹೊರಬರುತ್ತಿದೆ. ಇದನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಅಲ್ಲದೆ ಇದು ದೇವರ ಪವಾಡ ಎಂದೇ ನಂಬಿ ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾ ರೆ.
ಅಲ್ಲದೆ ಮರದ ಬುಡದಲ್ಲಿ ಕಲ್ಲುಗಳನ್ನಿಟ್ಟು ಗದ್ದಿ ದ್ಯಾಮಮ್ಮ ದೇವಿ ರೂಪದಲ್ಲಿ ಪೂಜಿಸುತ್ತಿದ್ದಾರೆ. ಇನ್ನೊಂದೆಡೆ ಗ್ರಾಮಸ್ಥರು ಜ್ಯೋತಿಷಿಗಳ ಬಳಿ ನಮ್ಮ ಗ್ರಾಮದ ಗದ್ದಿ ದ್ಯಾಮಮ್ಮ ಬೇವಿನ ಮರದಲ್ಲಿ ಹಾಲು ಜಿನುಗುತ್ತಿರುವುದರಿಂದ ಏನಾದರೂ ಲಾಭ, ನಷ್ಟ ಸಂಭವಿಸುತ್ತದೆಯಾ ಎಂದು ಭವಿಷ್ಯ ಕೇಳಿದ್ದಾರೆ. ಇದು ದೇವಿ ಪವಾಡವಾಗಿದೆ. ಇದಕ್ಕೆ ಜ್ಯೋತಿಷಿಗಳು ವಿಶೇಷ ಪೂಜೆ ಮಾಡಿ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರಂತೆ. ಹೀಗಾಗಿ ಗ್ರಾಮಸ್ಥರು ಬೇವಿನ ಮರಕ್ಕೆ ವಿಶೇಷ ಪೂಜೆ ಮಾಡುತ್ತಿದ್ದಾರೆ. ಇದನ್ನು ನೋಡಲು ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡಿದ್ದರು.
ಹಾಲು ಹೊರಬರಲು ಕಾರಣ.. ಇದು ಮರದಲ್ಲಿರುವ ಫ್ಲ್ಯುಯಿಡ್ ಅಂಶ, ಕೀಟಗಳಿಂದ ಎದುರಾಗುವ ರೋಗವನ್ನು ಸ್ವಯಂ ನಿಯಂತ್ರಿಸಿಕೊಳ್ಳಲು ಸಸ್ಯಗಳು ದ್ರವ ರೂಪದ ಈ ಫ್ಲುಯಿಡ್ಅನ್ನು ಹೊರಹಾಕುತ್ತವೆ. ಇದು ಸಹಜ ಪ್ರಕ್ರಿಯೆ. ಆದ್ರೆ ಇದನ್ನರಿಯದ ಜನ ಭಕ್ತಿ ಪರಾಕಾಷ್ಠೆ ಮೆರೆಯುತ್ತಿದ್ದಾರೆ.