ಕುಷ್ಟಗಿ(ಕೊಪ್ಪಳ): ತಾಲೂಕಿನ ಪ್ರಗತಿಪರ ರೇಷ್ಮೆ ಕೃಷಿಕ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡುಗಳ ಧಾರಣೆ ಕುಸಿತ ಕಂಡ ಬೆನ್ನಲ್ಲೇ ಅದೇ ರೇಷ್ಮೆ ಶೆಡ್ ನಲ್ಲಿಯೇ ಟಗರು ಮರಿ ಸಾಕಣೆ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ.
ಈ ಕೃಷಿಕ ರೇಷ್ಮೆ ಕೃಷಿಯಲ್ಲಿ ಮುಂದುವರಿಯುವ ಬದಲಿಗೆ ಪರ್ಯಾಯವಾಗಿ ಟಗರು ಸಾಕಣೆ ಮಾಡುತ್ತಿದ್ದಾರೆ. ಎಂಬಿಎ ಪದವೀಧರ ವಿನೋದ ಕುಮಾರ್ ಶಂಕರಪ್ಪ ಕವಡಿಕಾಯಿ ಅವರು, ರೇಷ್ಮೆಗೂಡುಗಳ ಧಾರಣೆ ಪ್ರತಿ ಕೆಜಿಗೆ 50 ರಿಂದ 100 ರೂ. ಕುಸಿತ ಕಂಡಿದ್ದು, ನಷ್ಟದಿಂದ ಹೊರ ಬರಲು, ಅದೇ ರೇಷ್ಮೆ ಸಾಕಣೆ ಶೆಡ್ ನಲ್ಲಿ ಟಗರುಗಳ ಸಾಕಣೆ ಆರಂಭಿಸಿದ್ದಾರೆ.
5,100 ರೂ.ಗೆ ಒಂದರಂತೆ 20 ಟಗರು ಮರಿಗಳನ್ನು ಖರೀದಿಸಿರುವ ಅವರು ನಾಲ್ಕೈದು ತಿಂಗಳು ಅವುಗಳನ್ನು ಬೆಳೆಸಿ ನಂತರ ಮಾರಾಟ ಮಾಡುವ ಯೋಜನೆ ಮಾಡಿದ್ದಾರೆ. ಸದ್ಯ ಟಗರು ಮಾಂಸಕ್ಕೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಚೆನ್ನಾಗಿ ಬೆಳೆಸಿ, ಸ್ಥಳೀಯ ಮಾರಾಟದ ಬದಲಿಗೆ ಹೊರ ರಾಜ್ಯಗಳಿಗೆ ಮಾರಾಟ ಮಾಡಿ ಆದಾಯಗಳಿಸುವುದು ಅವರ ಪ್ಲಾನ್ ಆಗಿದೆ.
ರೇಷ್ಮೆ ಹುಳುಗಳಿಗೆ ತಿನ್ನಿಸುವ ಹಿಪ್ಪು ನೇರಳೆ ಸೊಪ್ಪನ್ನು ಟಗರು ಮರಿಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಜೊತೆಗೆ ಮೆಕ್ಕೆಜೋಳ, ಹುರಳಿ, ಕಡಲೆ ಹೊಟ್ಟನ್ನೂ ಆಹಾರವಾಗಿ ಕೊಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ರೇಷ್ಮೆಗೂಡುಗಳ ಧಾರಣೆ ಸ್ಥಿರಗೊಳ್ಳುವವರೆಗೂ ಟಗರು ಸಾಕಣೆಯಲ್ಲೇ ಮುಂದುವರೆಯುತ್ತೇನೆ ಎನ್ನುತ್ತಾರೆ ಯುವ ಕೃಷಿಕ ವಿನೋದ್ ಕುಮಾರ. ಸದ್ಯ 20 ಟಗರುಗಳಿದ್ದು, 3 ಆಡುಗಳಿವೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಟಗರು ಮರಿಗಳನ್ನು ಸಾಕಣೆ ಮಾಡುವ ಯೋಜನೆಯಲ್ಲಿದ್ದಾರೆ.