ಕುಷ್ಟಗಿ (ಕೊಪ್ಪಳ) : ಮುಸ್ಲಿಂ ಸಮುದಾಯದ ಮುಖಂಡರೋರ್ವರು ಪ್ರತಿ ವರ್ಷದಂತೆ ಈ ವರ್ಷವೂ ಕುಷ್ಟಗಿಯ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಿಧ ಸಮುದಾಯದವರ ವಿವಾಹ ನೆರವೇರಿಸಿದ್ದಾರೆ. ವಜೀರ್ ಅಲಿ ಬಿ. ಗೋನಾಳ ಎಂಬವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ 30 ಜೋಡಿಗಳು ಹಸೆಮಣೆ ಏರಿದರು.
ಇಲ್ಲಿನ ಬನ್ನಿಕಟ್ಟೆ ಸಂತೆ ಮೈದಾನದಲ್ಲಿರುವ ಬನ್ನಿ ಮಹಾಂಕಾಳಿ ದೇವತೆಗೆ ಕಾರ್ತಿಕ ಮಹೋತ್ಸವದ ಅಂಗವಾಗಿ ಅಭಿಷೇಕ, ವಿಶೇಷ ಪೂಜೆ, ಹೋಮ ಹವನ, ಪೂರ್ಣಾಹುತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮದಲ್ಲಿ ಮದ್ದಾನಿಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಮುರಡಿ ಮಠದ ಬಸವಲಿಂಗ ಸ್ವಾಮೀಜಿ, ಕುಕನೂರು ಮಹಾದೇವ ಸ್ವಾಮೀಜಿ, ಜೀಗೇರಿ ಸ್ವಾಮೀಜಿ ಹಾಗೂ ಹಜರತ್ ಸಯ್ಯದ ಅಬ್ದುಲ್ ಖಾದ್ರಿ ಫೈಸಲ್ ಪಾಷಾ ಸಾನಿಧ್ಯ ವಹಿಸಿದ್ದರು. ಭಗತ್ ಸಿಂಗ್ ಸಾಂಸ್ಕೃತಿಕ ಕ್ರೀಡಾ ಸಂಸ್ಥೆ, ಬನ್ನಿ ಮಹಾಂಕಾಳಿ ಸೇವಾ ಸಮಿತಿ ಅಧ್ಯಕ್ಷ ವಜೀರ್ ಅಲಿ ಗೋನಾಳ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.