ಕೊಪ್ಪಳ:ಮಳೆಗಾಲ ಆರಂಭವಾದರೂ ಜಿಲ್ಲೆಯಲ್ಲಿ ಬಿಸಿಲಿನ ತಾಪ ಇನ್ನೂ ತಗ್ಗುತ್ತಿಲ್ಲ. ಬಿಸಿಲಿನ ಬೇಗೆಗೆ ಜನ, ಜಾನುವಾರುಗಳಲ್ಲದೆ ತೋಟಗಾರಿಕೆ ಬೆಳೆಗಳು ಬಾಡಿ ಹೋಗುತ್ತಿವೆ. ಬಿಸಿಲಿನ ಹೊಡೆತಕ್ಕೆ ಈ ಬಾರಿ ಮಾವು ಹಾನಿಗೊಳಗಾಗುತ್ತಿದೆ. ಇದರಿಂದಾಗಿ ಮಾವು ಬೆಳೆದ ರೈತರ ಮುಖ ಬಾಡಿ ಹೋಗುತ್ತಿದೆ.
ಹೌದು, ಜಿಲ್ಲೆಯಲ್ಲಿ ವಿಪರೀತ ಬಿಸಿಲಿನ ಪರಿಣಾಮದಿಂದಾಗಿ ಈ ಬಾರಿಯೂ ಮಾವಿನ ಫಸಲು ಕೈಕೊಡುತ್ತಿದೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತರಿಗೆ ಸಂಕಷ್ಟ ಎದುರಾಗುತ್ತಿದೆ. ಬಿಸಿಲಿನ ಪರಿಣಾಮದಿಂದಾಗಿ ಸರಿಯಾಗಿ ಹೂ ಕಟ್ಟಿಲ್ಲ. ಕಟ್ಟಿದ ಹೂವು ಹೀಚುಕಾಯಿಯಾಗಿ, ಬಲಿತು ಕೈಗೆ ಬರುತ್ತಿದೆ ಎನ್ನುವಾಗಲೇ ಉದುರಿ ಬೀಳುತ್ತಿದೆ. ಮಾವಿನ ಮೇಲೆ ಹಳದಿ ಹಾಗೂ ಕಪ್ಪು ಕಲೆಯಂತಾಗಿ ಉದುರಿ ಬೀಳುತ್ತಿದೆ. ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತಿದೆ.