ಕರ್ನಾಟಕ

karnataka

ETV Bharat / state

ಕೊಪ್ಪಳ ಬಾಲಕನ ಹತ್ಯೆ ಪ್ರಕರಣ: ಹಳ್ಳದಲ್ಲಿ ಹೂತಿಟ್ಟಿದ್ದ ಮೃತದೇಹ ಪತ್ತೆ - Koppal

ತಳಕಲ್ ಗ್ರಾಮದ 11 ವರ್ಷದ ಬಾಲಕ ಮಂಜುನಾಥ ರೇಣುಕಪ್ಪ ಬುರ್ಲಿ ಎಂಬ ಬಾಲಕನ ಶವ ಹೂತಿಟ್ಟಿರುವ ಬಗ್ಗೆ ಕೊಲೆ ಆರೋಪಿ ಅದೇ ಗ್ರಾಮದ ಅಣ್ಣಪ್ಪ ನಡುವಲಮನಿ ಎಂಬಾತ ಬಾಯ್ಬಿಟ್ಟಿದ್ದ. ಹೀಗಾಗಿ ಆರೋಪಿಯನ್ನು ಪೊಲೀಸರು ಸ್ಥಳಕ್ಕೆ ಕರೆ ತಂದಿದ್ದರು. ಇದೀಗ ಮೃತದೇಹ ಪತ್ತೆಹಚ್ಚಲಾಗಿದೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು- ಮುಟ್ಟಿದೆ.

Koppal
ಬಾಲಕನನ್ನು ಹತ್ಯೆ ಮಾಡಿ ಹಳ್ಳವೊಂದರಲ್ಲಿ ಹೂತಿಟ್ಟ: ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿ..

By

Published : Jul 23, 2020, 2:09 PM IST

Updated : Jul 23, 2020, 2:26 PM IST

ಕೊಪ್ಪಳ: ಆತ ಏನೂ ಅರಿಯದ 11 ವರ್ಷದ ಮುದ್ದಾದ ಬಾಲಕ. ತನ್ನದೇ ಊರಿನ ಪರಿಚಯದವನು ಕರೆದ ಎಂದು ಆತನ‌ ಹಿಂದೆ ಹೋಗಿದ್ದಾನೆ. ಹೀಗೆ ಹೋದ ಬಾಲಕ ಮತ್ತೆ ಮರಳಿ ಬರಲೇ ಇಲ್ಲ. ಆತನನ್ನು ಕರೆದೊಯ್ದಿದ್ದ ಆ ಪಾಪಿ ಹತ್ಯೆ ಮಾಡಿ ಹಳ್ಳವೊಂದರಲ್ಲಿ ಹೂತಿಟ್ಟಿದ್ದಾನೆ.

ಕೊಪ್ಪಳ ಬಾಲಕನ ಹತ್ಯೆ ಪ್ರಕರಣ: ಹಳ್ಳದಲ್ಲಿ ಹೂತಿಟ್ಟಿದ್ದ ಮೃತದೇಹ ಪತ್ತೆ

ಒಂದು ಕಡೆ ಸೇತುವೆ ಮೇಲಿಂದ ಜನರು ಕುತೂಹಲದಿಂದ ನೋಡುತ್ತಿರುವ ದೃಶ್ಯ. ಮತ್ತೊಂದೆಡೆ ಸಂಬಂಧಿಕರ ರೋಧನ. ಇಂತಹ ದೃಶ್ಯ ಕಂಡು ಬಂದಿದ್ದು, ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಹಳ್ಳವೊಂದರ ಬಳಿ. ಕುಕನೂರು ತಾಲೂಕಿನ ತಳಕಲ್ ಗ್ರಾಮದ 11 ವರ್ಷದ ಬಾಲಕ ಮಂಜುನಾಥ ರೇಣುಕಪ್ಪ ಬುರ್ಲಿ ಎಂಬ ಬಾಲಕನ ಶವ ಹೂತಿರುವ ಬಗ್ಗೆ ಕೊಲೆ ಆರೋಪಿ ಅದೇ ಗ್ರಾಮದ ಅಣ್ಣಪ್ಪ ನಡುವಲಮನಿ ಎಂಬಾತ ಬಾಯ್ಬಿಟ್ಟಿದ್ದ. ಹೀಗಾಗಿ ಆರೋಪಿಯನ್ನು ಪೊಲೀಸರು ಸ್ಥಳಕ್ಕೆ ಕರೆ ತಂದಿದ್ದರು.

ಬಾಲಕ ಮಂಜುನಾಥ್ ಜು.19 ರಂದು ನಾಪತ್ತೆಯಾದ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದಾಗ ಅದೇ ತಳಕಲ್ ಗ್ರಾಮದ ಅಣ್ಣಪ್ಪ ನಡುವಲಮನಿ ಎಂಬಾತ ಬಾಲಕನನ್ನು ಬೈಕ್ ಮೇಲೆ ಕರೆದುಕೊಂಡು ಹೋದ ಕುರಿತು ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಅಣ್ಣಪ್ಪನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.‌ ಅಲ್ಲದೇ ಬಾಲಕನನ್ನು ಹಳ್ಳದಲ್ಲಿ ಹೂತಿರುವುದಾಗಿ ಹೇಳಿದ್ದಾನೆ.

ಈ ಹಿನ್ನೆಲೆಯಲ್ಲಿ ಹಲಗೇರಿ ಬಳಿ ಹಳ್ಳಕ್ಕೆ ಪೊಲೀಸರು ಆರೋಪಿಯನ್ನು ಕರೆ ತಂದಿದ್ದರು. ಇದನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು. ಸ್ಥಳಕ್ಕಾಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹಣದ ಆಸೆಗಾಗಿ ತಮ್ಮ ಮಗನನ್ನು ಆರೋಪಿ ಅಣ್ಣಪ್ಪ ಕೊಲೆ ಮಾಡಿದ್ದಾನೆ. ಆತನ ಕಣ್ಣು, ಕಿಡ್ನಿ ಮಾರಾಟ ಮಾಡಲು ಈ ಕೃತ್ಯ ಎಸಗಿದ್ದಾನೆ ಎಂದು ಮೃತ ಬಾಲಕನ ತಾಯಿ ಲಕ್ಷ್ಮವ್ವ ಆರೋಪಿಸಿದ್ದಾಳೆ.

ಬಾಲಕನನ್ನು ಕೊಲೆ ಮಾಡಿ ಹೂತಿಟ್ಟಿದ್ದ ಜಾಗಕ್ಕೆ ಆರೋಪಿ ಅಣ್ಣಪ್ಪನನ್ನು ಕುಕನೂರು ಪೊಲೀಸರು ಬುಧವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಕರೆ ತಂದಿದ್ದರು. ಮೊದ ಮೊದಲು ಆರೋಪಿ ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಆರೋಪಿ ಕೊಲೆ‌ ಮಾಡಿ ಹೂತಿಟ್ಟಿದ್ದ ಬಾಲಕ ಮಂಜುನಾಥನ ಶವವನ್ನು ಸಂಜೆ 4.30 ರ ವೇಳೆಗೆ ಹೊರಗೆ ತೆಗೆಯಲಾಯಿತು. ಬಾಲಕನ ಕೊಲೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ಇನ್ನೂ ತನಿಖೆ‌ ನಡೆಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ತಿಳಿಸಿದ್ದಾರೆ.

ಬಾಲಕನ ಕೊಲೆಯ ಹಿಂದೆ ಏನೇನೋ ಮಾತುಗಳು ಕೇಳಿ ಬರುತ್ತವೆ. ಕುಟುಂಬದ ನಡುವೆ ಯಾವುದೇ ದ್ವೇಷವಿರಲಿಲ್ಲ. ಆದರೆ ಆರೋಪಿ ಯಾಕೆ ಆ ಬಾಲಕನನ್ನು ಕೊಲೆ ಮಾಡಿದ್ದಾನೆ ಎಂಬುದು ಈಗ ಪ್ರಶ್ನೆಯಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಯ ಸಂಪೂರ್ಣ ವಿಚಾರಣೆ ಬಳಿಕ ಬಾಲಕನ ಕೊಲೆಗೆ ನಿಜವಾದ ಕಾರಣವೇನು ಎಂಬುದು ಗೊತ್ತಾಗಲಿದೆ.‌

Last Updated : Jul 23, 2020, 2:26 PM IST

ABOUT THE AUTHOR

...view details