ಕೊಪ್ಪಳ:ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ ಜಿಲ್ಲೆಯ ಯುವಕನೋರ್ವ ಕೈ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ. ಇದಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಮಾಡಿದ ಎಡವಟ್ಟು ಕಾರಣ ಎಂಬ ಆರೋಪ ಕೇಳಿಬಂದಿದೆ. ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಹನುಮಂತಪ್ಪ ತಳವಾರ ಎಂಬ ಯುವಕನ ಕೈಯಲ್ಲಿ ಬಲವಾದ ಗಾಯವಾಗಿ ಕೈಕಳೆದುಕೊಳ್ಳುವ ಹಂತಕ್ಕೆ ಬಂದಿದ್ದಾನೆ. ಹನುಮಂತಪ್ಪ ತಳವಾರ ಕಳೆದ ಅಕ್ಟೋಬರ್ 4 ರಂದು ಬಹದ್ದೂರಬಂಡಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ.
ಕೈ ಕಳೆದುಕೊಳ್ಳುವ ಭೀತಿಯಲ್ಲಿ ವ್ಯಾಕ್ಸಿನ್ ಪಡೆದ ಯುವಕ ಸ್ಟಾಫ್ ನರ್ಸ್ ಪ್ರಭಾವವತಿ ಎನ್ನುವರು ವ್ಯಾಕ್ಸಿನೇಷನ್ ಹಾಕಿದ್ದರು. ದಾದಿ ಪ್ರಭಾವತಿ ಹನುಮಂತಪ್ಪನ ಕೈಗೆ ಸರಿಯಾಗಿ ವ್ಯಾಕ್ಸಿನ್ ಹಾಕದ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಹಾಕಿದ ಜಾಗದಲ್ಲಿ ನಾಲ್ಕೇ ದಿನದಲ್ಲಿ ಬಾವು ಕಾಣಿಸಿಕೊಂಡಿತ್ತು. ಬಳಿಕ ಹನುಮಂತಪ್ಪನ ಕೈಗೆ ಗಂಭೀರ ಗಾಯವಾಗಿದೆ. ಕೈ ಗಾಯದ ಕುರಿತು ಹನುಮಂತಪ್ಪ ಆರೋಗ್ಯ ಇಲಾಖೆಯವರ ಗಮನಕ್ಕೆ ತಂದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದೆ.
ಬಳಿಕ ಹನುಮಂತಪ್ಪ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಅಲ್ಲದೆ ಆರೋಗ್ಯ ಇಲಾಖೆಯವರ ಎಡವಟ್ಟಿನಿಂದ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಾಯಾಳು ಹನುಮಂತಪ್ಪ ಆಗ್ರಹಿಸಿದ್ದಾನೆ.