ಕೊಪ್ಪಳ: ಕೊರೊನಾ ಭೀತಿ ಹಾಗೂ ಲಾಕ್ಡೌನ್ ಪರಿಣಾಮವಾಗಿ ಸಾಮಾನ್ಯ ಜನರ ಬದುಕು ಹಳಿತಪ್ಪಿದೆ. ಲಾಕ್ಡೌನ್ನಿಂದಾಗಿ ಕೆಲವರು ಹೊಸ ಚಿಂತನೆಯತ್ತ ಮುಖ ಮಾಡುವಂತೆಯೂ ಮಾಡಿದೆ.
ಆಟೋ ಡೆಕೋರೇಟ್ ಅಂಗಡಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ಕೊರೊನಾ ಲಾಕ್ಡೌನ್ ಪರಿಣಾಮವಾಗಿ ಕೃಷಿಯತ್ತ ಮುಖಮಾಡಿದ್ದಾರೆ. ಅದರಲ್ಲೂ ಮಲೆನಾಡ ಬೆಳೆಯಾದ ಶುಂಠಿ ಬೆಳೆಯನ್ನು ಬಿರುಬಿಸಿಲಿನ ನಾಡಿನಲ್ಲಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ. ಸದ್ಯ ಶುಂಠಿ ಬೆಳೆ ಭರ್ಜರಿಯಾಗಿದ್ದು ಉತ್ತಮ ಇಳುವರಿ, ಉತ್ತಮ ಲಾಭದ ನಿರೀಕ್ಷೆ ಮೂಡಿಸಿದೆ.
ಲಾಕ್ಡೌನ್ನಿಂದಾದ ಅಸಮತೋಲನದಿಂದಾಗಿ ಜನರು ಬದುಕು ಕಟ್ಟಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಲಾಕ್ಡೌನ್ ಪರಿಣಾಮ ಜನರನ್ನು ಬೇರೆ ಬೇರೆ ಕ್ಷೇತ್ರಗಳತ್ತ ಹೊರಳುವಂತೆ ಮಾಡಿದ್ದು, ಅನೇಕರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಂತೆ ಕೊಪ್ಪಳ ನಗರದ ನಿವಾಸಿ ರಾಜು ಚಿಲವಾಡಗಿ ಎಂಬುವವರು ಕೃಷಿ ಕ್ಷೇತ್ರದಲ್ಲಿ ತೊಡಗಿದ್ದಾರೆ.
ಈಗಾಗಲೇ ಸುಮಾರು ನಾಲ್ಕು ತಿಂಗಳ ಹಿಂದೆಯೇ ಎರಡು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆ ನಾಟಿ ಮಾಡಿದ್ದು ಉತ್ತಮವಾಗಿ ಬೆಳೆದಿದೆ. ಸಾಮಾನ್ಯವಾಗಿ ಶುಂಠಿ ಬೆಳೆಗೆ ಮಲೆನಾಡ ಪರಿಸರ ಉತ್ತಮ. ಬಿಸಿಲನಾಡಿನಲ್ಲಿ ಶುಂಠಿ ಬೆಳೆ ಕಂಡು ಬರುವುದಿಲ್ಲ. ಈ ಭಾಗದಲ್ಲಿ ಶುಂಠಿಯನ್ನು ಏಕೆ ಬೆಳೆಯಬಾರದು ಎಂದು ರಾಜು ಚಿಲವಾಡಗಿ ತಮ್ಮ ಎರಡು ಎಕರೆ ಭೂಮಿಯಲ್ಲಿ ಡ್ರಿಪ್ ಪದ್ದತಿಯ ಮೂಲಕ ಶುಂಠಿ ಬೆಳೆದಿದ್ದಾರೆ.
ಸುಮಾರು ಎರಡು ಲಕ್ಷ ರುಪಾಯಿಗೂ ಹೆಚ್ಚು ಖರ್ಚು ಮಾಡಿದ್ದು, ನಾಲ್ಕು ತಿಂಗಳು ಕಳೆದರೆ ಶುಂಠಿ ಕಟಾವಿಗೆ ಬರುತ್ತದೆ. ಈ ಭಾಗದಲ್ಲಿ ಹುಡುಕಾಡಿದರೂ ಹತ್ತು ಎಕರೆಯಷ್ಟು ಸಹ ಶುಂಠಿ ಬೆಳೆ ಸಿಗುವುದಿಲ್ಲ. ಆದರೂ ಕೂಡಾ ಶುಂಠಿ ಬೆಳೆಗೆ ಪೂರಕವಲ್ಲದ ಇಲ್ಲಿನ ವಾತಾವರಣದ ನಡುವೆಯೂ ರಾಜು ಚಿಲವಾಡಗಿ ಶುಂಠಿ ಬೆಳೆಯುವ ಸಾಹಸ ಮಾಡಿದ್ದಾರೆ. ಇದೊಂದು ಪ್ರಯೋಗ, ಬೆಳೆ ಉತ್ತಮವಾಗಿ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರಾಜು ಚಿಲವಾಡಗಿ.
ಶುಂಠಿ ಬೆಳೆಗೆ ಮಳೆ ಅಧಿಕ ಹಾಗೂ ತಂಪಾದ ವಾತಾವರಣ ಇರಬೇಕು. ಸುಮಾರು 800 ಮಿಲಿಮೀಟರ್ ಮಳೆಯಾಗಬೇಕು. ಆದರೆ ಕೊಪ್ಪಳ ಭಾಗದಲ್ಲಿ ಬಿಸಿಲು ಜಾಸ್ತಿ ಮತ್ತು ಮಳೆಯೂ ಕಡಿಮೆ. ಹೀಗಾಗಿ ಈ ಭಾಗದಲ್ಲಿ ಶುಂಠಿ ಬೆಳೆಯುವುದು ಕಷ್ಟ. ಆದರೂ ಸಹ ಈ ರೈತ ಶುಂಠಿ ಬೆಳೆಯಲು ಮುಂದಾಗಿರೋದು ಸಾಹಸವೇ ಸರಿ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ.