ಕೊಪ್ಪಳ:ಮಹರ್ಷಿ ವಾಲ್ಮೀಕಿ ಜಾತ್ರೆ ಅಂದ್ರೆ ಅದು ಕೇವಲ ಸಂಭ್ರಮ-ಸಡಗರ ಮಾತ್ರವಲ್ಲ. ಇವೆಲ್ಲದರ ಜೊತೆಗೆ ಸಾಂವಿಧಾನಿಕ ಹಕ್ಕುಗಳಿಗೆ ಆಗ್ರಹ ಮಾಡುವುದಾಗಿದೆ ಎಂದು ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯ ನಾಲ್ಕನೇ ಅತಿದೊಡ್ಡ ಸಮುದಾಯವಾಗಿದೆ. ನಾಡು-ನುಡಿಗೆ ತನ್ನದೇ ಆದ ಕೊಡುಗೆ ನೀಡಿದೆ. ಸ್ವಾತಂತ್ರ್ಯದ ನಂತರ ಸಮುದಾಯದ ಕುಲಕಸುಬು ಬೇಟೆಯಾಡುವುದು ಮೂಲೆಗುಂಪಾಗಿದೆ. ಬದಲಾದ ಸಾಮಾಜಿಕ ಸ್ಥಿತ್ಯಂತರಕ್ಕೆ ಸಮುದಾಯದ ಜನರು ಬದುಕನ್ನು ಒಗ್ಗಿಸಿಕೊಂಡಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮೀಸಲಾತಿ ನೀಡಿದ್ದಾರೆ. ಚುನಾವಣೆ ಬಂದಾಗ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಆಶ್ವಾಸನೆ ನೀಡಿ ಚುನಾವಣೆ ಬಳಿಕ ಮರೆತುಬಿಡುತ್ತಾರೆ. ಈ ದಿಸೆಯಲ್ಲಿ ಜಾಗೃತರಾಗಿ, ಸಂಘಟಿತರಾಗುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಐತಿಹಾಸಿಕ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯೂ ಮೂರನೇ ವರ್ಷದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಜಾತ್ರಾ ಮಹೋತ್ಸವಕ್ಕೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಸಮುದಾಯದ ಜನರನ್ನು ಆಹ್ವಾನಿಸಲಾಗುತ್ತಿದೆ ಎಂದರು.