ಕೊಪ್ಪಳ :ಲಕ್ಷಾಂತರ ರೂ. ಬೆಲೆ ಬಾಳುವ ವಿಶಿಷ್ಟ ತಳಿಯ ಕುರಿಯೊಂದರ ಹೆರಿಗೆ ಮಾಡಿಸಲು ಕುರಿಗಾಯಿಯೊಬ್ಬ ಬರೋಬ್ಬರಿ 300 ಕಿ.ಮೀ ದೂರದಿಂದ ಬಂದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ. ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ನಡೆಸಿದ ವೈದ್ಯರು ತಾಯಿ ಕುರಿಯನ್ನು ಬದುಕಿಸುವಲ್ಲಿ ಯಶಸ್ವಿಯಾದರೂ ಸಹ ಮರಿ ಉಳಿಸಿಕೊಳ್ಳಲು ಆಗಲಿಲ್ಲ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ವಿಠೋಬಾ ಡಂಗೆ ಎಂಬುವರ ಕುರಿಗೆ ಹೆರಿಗೆ ಸಮಸ್ಯೆಯಾಗಿತ್ತು. ಹೆರಿಗೆ ನೋವು ಕಾಣಿಸಿದ ಬಳಿಕ ಎರಡು ದಿನದವರೆಗೆ ಕುರಿ ಮರಿ ಹಾಕಲಿಲ್ಲ. ಹೀಗೆ ಬಿಟ್ಟರೆ ತಾಯಿ ಕುರಿ ಸಾವನ್ನಪ್ಪುತ್ತದೆ ಎಂದುಕೊಂಡ ವಿಠೋಬ ಡಂಗೆ ಕುರಿಯೊಂದಿಗೆ ಕೊಪ್ಪಳಕ್ಕೆ ಬಂದಿದ್ದರು.
ಇಲ್ಲಿನ ಪಶು ಸಂಗೋಪನಾ ಇಲಾಖೆ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದರು. ಆದರೆ, ಕುರಿ ಹೊಟ್ಟೆಯಲ್ಲಿ ಮರಿ ಸಾವನ್ನಪ್ಪಿತ್ತು. ಶಸ್ತ್ರ ಚಿಕಿತ್ಸೆ ಮಾಡಿ ತಾಯಿ ಕುರಿಯ ಜೀವ ಉಳಿಸಿದ್ದಾರೆ.
ಕೊಪ್ಪಳದಲ್ಲಿ ಪಶು ಇಲಾಖೆ ಉಪನಿರ್ದೇಶಕರಾಗಿರುವ ಅಶೋಕ ಗೊಣಸಗಿಯವರು ಈ ಮೊದಲು ವಿಜಯಪುರ ಜಿಲ್ಲೆಯಲ್ಲಿದ್ದಾಗ ಕುರಿಯ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ಈಗ ದೂರದಲ್ಲಿದ್ದರೂ ಚಿಂತೆ ಇಲ್ಲ ಎಂದು ವಿಠೋಬ ಡಂಗೆ ಸುಮಾರು 15 ಸಾವಿರ ರೂ. ಖರ್ಚು ಮಾಡಿ ಬಾಡಿಗೆ ವಾಹನ ಮಾಡಿಕೊಂಡು ಕೊಪ್ಪಳಕ್ಕೆ ಬಂದು ಕುರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಸುಮಾರು ನಾಲ್ಕು ಜನ ವೈದ್ಯರ ತಂಡ ಎರಡು ಗಂಟೆಗಳ ಅಧಿಕ ಸಮಯ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡಿದೆ.