ಕೊಪ್ಪಳ:ವೀಳ್ಯದೆಲೆಗೆ ನಮ್ಮಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್ ಪರಿಣಾಮದಿಂದ ವೀಳ್ಯದೆಲೆ ಬೆಳೆದ ರೈತನಿಗೆ ಸ್ಥಾನವಿಲ್ಲದಂತಾಗಿದೆ. ಬೆಳೆದ ವೀಳ್ಯದೆಲೆಗೆ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೆ ರೈತರು ಬಾಡಿ ಹೋಗಿದ್ದಾರೆ.
ಹೌದು, ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್ ಪರಿಣಾಮ ಎಲ್ಲ ವರ್ಗದ ಜನರ ಹಾಗೂ ಎಲ್ಲ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕೃಷಿ, ತೋಟಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳ ಮೇಲೆ ಕರಿನೆರಳು ಬೀರಿದೆ. ಇದರಿಂದಾಗಿ ಅನೇಕರ ಬದುಕು ತುಂಬಾ ದುಸ್ತರವಾಗಿ ಪರಿಣಮಿಸಿದೆ. ಅದರಲ್ಲಿ ತೋಟಗಾರಿಕೆ ಬೆಳೆಗಳ ವ್ಯಾಪ್ತಿಯಲ್ಲಿ ಬರುವ ವೀಳ್ಯಕ್ಕೆ ಬೆಲೆ ಇಲ್ಲದೆ ಬಾಡಿ ಹೋಗುತ್ತಿವೆ.
ಕೊಪ್ಪಳ ಜಿಲ್ಲೆಯ ಡಂಬ್ರಳ್ಳಿ, ಬೇಳೂರು, ಮಡಿಕೇರಿ, ಯರಗೇರಾ, ಹನುಮಸಾಗರ ಸೇರಿದಂತೆ ವಿವಿಧೆಡೆ ಕರಿಎಲೆ ಹಾಗೂ ಅಂಬಾಡಿ ಎಲೆಯನ್ನು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 50 ಹೆಕ್ಟರ್ ಪ್ರದೇಶ ಅಂದರೆ 125 ಎಕರೆ ಪ್ರದೇಶದಲ್ಲಿ ವೀಳ್ಯೆದೆಲೆಯನ್ನು ಬೆಳೆಯಲಾಗುತ್ತಿದೆ. ಎಲ್ಲವೂ ಸರಿ ಇದ್ದಿದ್ದರೆ ವೀಳ್ಯದೆಲೆ ಉತ್ತಮ ಆದಾಯ ತರುತ್ತಿತ್ತು. ಆದರೆ ಕಳೆದ ವರ್ಷದಿಂದ ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್ ಪರಿಣಾಮದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಗತ್ಯವಾಗಿರುವ ವೀಳ್ಯದೆಲೆ ಬೇಡಿಕೆ ಕಳೆದುಕೊಂಡಿದೆ.