ಗಂಗಾವತಿ(ಕೊಪ್ಪಳ):ಭತ್ತ ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ಮೇಲೆ ಲಾರಿಯೊಂದು ಮಗುಚಿ ಬಿದ್ದು, ಟ್ರ್ಯಾಕ್ಟರ್ ಜಖಂಗೊಂಡ ಘಟನೆ ನಗರದ ಎಪಿಎಂಸಿ ಬಳಿ ಸಂಭವಿಸಿದೆ.
ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕ ವಿಕ್ರಮ್ ಹನುಮಂತಪ್ಪ ವಡ್ಡರಹಟ್ಟಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದ ಹಿನ್ನೆಲೆ ಲಾರಿ ಚಾಲಕ ರೋಷನ್ ಜಮೀರ್ ಎಂ.ಡಿ. ಅತಾವುಲ್ಲಾ, ಕಾಮನ ಬಾವಿ ಬಡವಾಣೆ ಚಿತ್ರದುರ್ಗ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಟ್ರ್ಯಾಕ್ಟರ್ ಚಾಲಕ ವಿಕ್ರಮ್, ರೈತರೊಬ್ಬರ ಹೊಲದಿಂದ ಭತ್ತ ಹೊತ್ತು ಟ್ರ್ಯಾಕ್ಟರ್ ಮೂಲಕ ಎಪಿಎಂಸಿಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮೂತ್ರದ ಅವಸರವಾಗಿದೆ. ರಸ್ತೆ ಬದಿ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಚಾಲಕ ತೆರಳಿದ್ದಾನೆ. ಇದೇ ಸಂದರ್ಭದಲ್ಲಿ ಕನಕಗಿರಿ ಮಾರ್ಗದಿಂದ ವೇಗವಾಗಿ ಬಂದ ಲೋಡ್ ತುಂಬಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮೇಲೆ ಮಗುಚಿ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್ ಎಂಜಿನ್ ಸಂಪೂರ್ಣ ಜಖಂ ಆಗಿದೆ.
ಘಟನೆ ಕುರಿತು ಸಂಚಾರಿ ಪಿಎಸ್ಐ ಪುಂಡಪ್ಪ ಜಾಧವ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.