ಗಂಗಾವತಿ ನ್ಯಾಯಾಲಯದಲ್ಲಿ ಲೋಕಾ ಆದಾಲತ್ ಗಂಗಾವತಿ(ಕೊಪ್ಪಳ):ಕೌಟುಂಬಿಕ ಕಲಹ, ಹೊಂದಾಣಿಕೆ ಕೊರತೆ, ವೈಮನಸ್ಸಿನಿಂದ ಮುನಿಸುಗೊಂಡು ಮತ್ತಿತರ ಕಾರಣಗಳಿಂದಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ, ವಿವಾಹ ವಿಚ್ಚೇದನದ ಅಂತಿಮ ಹಂತಕ್ಕೆ ಹೋಗಿದ್ದ ವಿವಾಹಿತ ನಾಲ್ಕು ಜೋಡಿಗಳನ್ನು ರಾಜೀ ಸಂಧಾನದ ಮೂಲಕ ಮರು ಹೊಂದಾಣಿಕೆ ಮಾಡುವಲ್ಲಿ ಇಲ್ಲಿನ ಗಂಗಾವತಿ ನ್ಯಾಯಾಲಯದ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ. ಪರಸ್ಪರ ಜೋಡಿಗಳಿಗೆ ಆಪ್ತ ಸಮಾಲೋಚನೆ ಮಾಡುವ ಮೂಲಕ ಪತಿ - ಪತ್ನಿಯರನ್ನು ಒಂದುಗೂಡಿಸಿದ ನ್ಯಾಯಾಧೀಶರು, ಪರಸ್ಪರ ಹೂವಿನ ಹಾರ ಹಾಕಿಸಿ, ಸಿಹಿ ತಿನಿಸಿ ಕೈ-ಕೈ ಹಿಡಿದು ಹೋಗುವಂತೆ ಮಾಡುವ ಮೂಲಕ ಪೌರೋಹಿತ್ಯವನ್ನು ಯಶಸ್ವಿಯಾಗಿ ನಿಭಾಯಿಸಿದರು.
ರಾಷ್ಟ್ರೀಯ ಲೋಕಾ ಅದಾಲತ್: ಗಂಗಾವತಿ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕಾ ಅದಾಲತ್ದಲ್ಲಿ ರಾಜೀಸಂಧಾನದ ಮೂಲಕ ನಾಲ್ಕು ಜೋಡಿಗಳನ್ನು ಒಂದುಗೂಡಿಸಲಾಯಿತು. ಇದು ಗಂಗಾವತಿ ನ್ಯಾಯಾಲಯದ ಇತಿಹಾಸದಲ್ಲೇ ಮಾತ್ರವಲ್ಲ, ಕೊಪ್ಪಳ ಜಿಲ್ಲಾ ಇತಿಹಾಸದಲ್ಲೇ ಮೊದಲ ಬಾರಿಗೆ ವಿವಾಹ ವಿಚ್ಛೇದನ ಹಂತಕ್ಕೆ ಹೋಗಿದ್ದ ನಾಲ್ಕು ಜೋಡಿಗಳಿಗೆ ಮರು ಹೊಂದಾಣಿಕೆ ಮಾಡಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿ ದಾಖಲೆ ಬರೆದಿದ್ದಾರೆ. ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎಂ.ಜಿ. ಶಿವಳ್ಳಿ, ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಎಸ್. ಗಾಣಿಗೇರ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಪಾಟೀಲ್ ಅವರು ರಾಜೀ ಸಂಧಾನದಲ್ಲಿ ಶ್ರಮಿಸಿದರು.
ವಿಚ್ಛೇದನ ಅರ್ಜಿ ಸಲ್ಲಿಸಿದ್ದ ದಂಪತಿಗಳು: ಗಂಗಾವತಿ ತಾಲೂಕಿನ ವೀರೇಶ - ಜಾನಕಿ, ಲಿಂಗಣ್ಣ - ಮಮತಾ, ದ್ಯಾಮಣ್ಣ ನಾಯಕ - ಅನಸೂಯ ಹಾಗೂ ಎರಡು ಮಕ್ಕಳಿರುವ ಶ್ರೀನಿವಾಸ - ತುಳಸಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಜೋಡಿ ಗಳನ್ನು ರಾಜೀ ಸಂಧಾನದ ಮೂಲಕ ದಾಂಪತ್ಯ ಕಲಹವನ್ನು ನ್ಯಾಯಾಧೀಶರು, ಕ್ಷಕಿದಾರರ ಪರ ವಕೀಲರು ಬಗೆಹರಿಸಿದರು.
ರಾಜೀ ಸಂಧಾನವೇ ಸೂಕ್ತ: ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ವೈಹಿವಾಹಿಕ ಜೀವನದಲ್ಲಿ ರಾಜೀ ಸಂಧಾನಕ್ಕಿಂತ ದೊಡ್ಡ ತೀರ್ಪು ಮತ್ತೊಂದಿಲ್ಲ. ಸಂಧಾನದ ಮೂಲಕ ಆಗಿರುವ ಒಪ್ಪಿಗೆ ದೀರ್ಘಕಾಲ ಬಾಳುತ್ತದೆ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ನಮ್ಮ ನ್ಯಾಯಾಲಯದ ಆವರಣದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಕಳೆದ 15 ವರ್ಷದಲ್ಲಿ ರಾಜೀಸಂಧಾನದ ಮೂಲಕ ಜೋಡಿಗಳನ್ನು ಒಂದುಗೂಡಿಸಿರುವುದು ಇದೇ ಮೊದಲು. ಯಾವುದೇ ಒಂದು ಸಲ್ಲದ ವಿಚಾರಕ್ಕೆ ದುಡುಕಿದ ಮನಸುಗಳು ವಿಚ್ಛೇದನದ ಹಂತಕ್ಕೆ ತಲುಪಿರುತ್ತವೆ. ಇದಕ್ಕೆ ಮರು ಬೆಸುಗೆ ಸೂಕ್ತವಾದದು ಎಂದು ತಿಳಿಸಿದರು.
ಪರಸ್ಪರ ಪ್ರೀತಿ ಅಗತ್ಯ: ವಕೀಲ ಎಚ್.ಸಿ. ಯಾದವ ಮಾತನಾಡಿ, ಎಲ್ಲರ ಮನೆಯಲ್ಲೂ ಕೌಟುಂಬಿಕ ಕಲಹ ಇರುವುದು ಸಹಜ. ಕೆಲವು ಪರಸ್ಪರ ಪತಿ-ಪತ್ನಿಯರ ಹೊಂದಾಣಿಕೆಯಲ್ಲಿ ಇತ್ಯರ್ಥವಾಗುತ್ತವೆ. ಇನ್ನು ಕೆಲವು ಹಿರಿಯ ಸಮ್ಮುಖದಲ್ಲಿ ಮರು ಹೊಂದಾಣಿಕೆ ಆಗುತ್ತವೆ. ಆದರೆ ಹೊಂದಾಣಿಕೆ ಆಗದ ಜೋಡಿಗಳು ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಅಂತ ಅರ್ಜಿ ಸಲ್ಲಿಸಿದ್ದ ನಾಲ್ಕು ಜೋಡಿಗಳಿಗೆ ನಮ್ಮ ಗಂಗಾವತಿ ನ್ಯಾಯಾಲಯದ ಇದೇ ಮೊದಲ ಬಾರಿಗೆ ರಾಜೀ ಪಂಚಾಯಿತಿ ಮಾಡಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ತುಳಸಿ ಮಾತನಾಡಿ, ಸಣ್ಣಪುಟ್ಟ ಜಗಳದಿಂದ ವಿಚ್ಛೇದನವರೆಗೂ ಬಂದಿದ್ದೇವೆ. ಮಕ್ಕಳ ಮುಖ ನೋಡಿದರೆ ಬೇರೆಯಾಗಿ ವಾಸಿಸಲು ಮನಸಾಗಲಿಲ್ಲ. ಆದರೆ ಕೋರ್ಟ್ನಲ್ಲಿ ನಡೆದ ರಾಜೀ ಪಂಚಾಯಿತಿಯಲ್ಲಿ ನಾವು ಮನಸು ಬದಲಿಸಿಕೊಂದು ಒಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮ ಜೀವನ ಸಾಗಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಕಿರುತೆರೆ ನಟಿ ಚಾಹತ್ ಖನ್ನಾಗೆ ನೋಟಿಸ್ ಕಳುಹಿಸಿದ ಸುಖೇಶ್ ಚಂದ್ರಶೇಖರ್..!