ಗಂಗಾವತಿ (ಕೊಪ್ಪಳ) :ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮೂರು ಜೋಡಿಗಳನ್ನು ಪರಸ್ಪರ ಆಪ್ತ ಸಮಾಲೋಚನೆ ನಡೆಸುವ ಮೂಲಕ ನ್ಯಾಯಾಧೀಶರು ಒಂದುಗೂಡಿಸಿದ್ದಾರೆ.
ಶನಿವಾರ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ದಲ್ಲಿ ವಿವಿಧ ಪ್ರಕರಣಗಳನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು, ಜೀವನಾಂಶ ಕೋರಿ ಬಂದಿದ್ದ ಅರ್ಜಿ, ರಸ್ತೆ ಅಪಘಾತ, ಚೆಕ್ ಬೌನ್ಸ್, ವಿಚ್ಛೇದನದಂತ ಪ್ರಕರಣಗಳನ್ನು ರಾಜಿ ಸಂಧಾನ ಮಾಡುವ ಮೂಲಕ ಇತ್ಯರ್ಥ ಮಾಡಿದರು.
ವಿವಿಧ ಕಾರಣಕ್ಕೆ ವಿಚ್ಛೇದನ ಕೋರಿ ಕಾರಟಗಿ ತಾಲೂಕಿನ ನವಲಿಯ ತಿರುಪತೆಪ್ಪ-ಲಕ್ಷ್ಮಿ ಅಲಿಯಾಸ ಬಸಮ್ಮ ನವಲಿ, ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳದ ಭೀಮೇಶ-ಮಂಜುಳಾ ಹಾಗೂ ಗಂಗಾವತಿ ತಾಲೂಕಿನ ವಿಠಲಾಪುರದ ರಾಮಪ್ಪ-ಸೌಭಾಗ್ಯ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ತಿರುಪತೆಪ್ಪ-ಲಕ್ಷ್ಮಿಗೆ 2020 ರಲ್ಲಿ, ಭೀಮೇಶ-ಮಂಜುಳಾ ಅವರಿಗೆ 2021ರಲ್ಲಿ ಹಾಗೂ ರಾಮಪ್ಪ-ಸೌಭಾಗ್ಯ ಎಂಬುವರಿಗೆ 2020ರಲ್ಲಿ ವಿವಾಹ ಆಗಿತ್ತು. ಆದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದ್ದರಿಂದ ಮೂರು ಜೋಡಿಗಳು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ ಸಂಸಾರಿಕ ಜೀವನದಿಂದ ದೂರವಿದ್ದ ಒಂದೇ ಕುಟುಂಬದ ಮೂವರು ಮಹಿಳೆಯರು ಜೀವನಾಂಶ ಕೋರಿ ಪ್ರತ್ಯೇಕವಾಗಿ ಅರ್ಜಿ ದಾಖಲಿಸಿದ್ದರು. ಮೂರು ಪ್ರಕರಣಗಳನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು, ರಾಜಿ ಸಂಧಾನ ಮಾಡುವ ಮೂಲಕ ವಿಚ್ಛೇದನ ಹಾದಿಯಲ್ಲಿದ್ದ ಜೋಡಿಗಳನ್ನು ಒಂದುಗೂಡಿಸಿದರು.