ಕೊಪ್ಪಳ: ರಾಜ್ಯ ಸರ್ಕಾರ ಕೊಪ್ಪಳ ಏತ ನೀರಾವರಿಗೆ 3.50 ಸಾವಿರ ಕೋಟಿ ರೂಪಾಯಿ ನೀಡಿದೆ. ಇದರಿಂದ 3.2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯಲಿದೆ. ಈ ಭಾಗದ ಭೂಮಿಗೆ ನೀರು ಹರಿದು ರೈತರು ಬಂಗಾರ ಬೆಳೆಯುವಂತಾಗಲಿ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಇಂದು ಕೃಷ್ಣಭಾಗ್ಯ ಜಲ ನಿಗಮದಿಂದ ಕೊಪ್ಪಳ ಏತ ನೀರಾವರಿ ಯೋಜನೆಯಡಿಯಲ್ಲಿ ಕೆರೆ ತುಂಬಿಸುವ ಯೋಜನೆಯ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಚಿವ ಹಾಲಪ್ಪ ಆಚಾರ್ ಆಶಯದಂತೆ ಯಲಬುರ್ಗಾ ರೈತರು ಶ್ರೀಮಂತರಾಗಬೇಕು. ಭಾರತ ಈಗ ಅರ್ಥಿಕತೆಯಲ್ಲಿ ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದ ಭಾರತ ಇಂದು ಶ್ರೀಮಂತವಾಗುತ್ತಿದೆ. ಬಂಡವಾಳ ಹೂಡಿಕೆ ಸೇರಿದಂತೆ ವಿದೇಶಿಗರು ಭಾರತದತ್ತ ಬರುತ್ತಿದ್ದಾರೆ. ನಮ್ಮ ದೇಶವು ಬರುವ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಿಚಾರ ಕುರಿತು ಮಾತನಾಡಿ, ಅಭ್ಯರ್ಥಿಗಳ ಘೋಷಣೆ ಮಾಡುವುದು ನಮ್ಮ ರಾಷ್ಟ್ರೀಯ ಮುಖಂಡರು, ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಈ ಬಗ್ಗೆ ತೀರ್ಮಾನಿಸಲಿದ್ದಾರೆ. ನಮ್ಮ ನಾಯಕರು ಸರಳ ಸಜ್ಜನಿಕೆ ಅಭ್ಯರ್ಥಿಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷದ ಕೆಲಸ ಮಾಡಿದವರಿಗೆ ಟಿಕೆಟ್ ನೀಡಲಿದ್ದಾರೆ. ಹಲವಾರು ಮಾನದಂಡದ ಆಧಾರದಲ್ಲಿ ಟಿಕೆಟ್ ನೀಡುತ್ತಾರೆ ಎಂದರು.
ಕೊಟ್ಟ ಮಾತಿನಂತೆ ನಡೆದಿದ್ದೇನೆ:ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕೊಟ್ಟ ಮಾತಿನಂತೆ ಕೆಲಸ ಮಾಡಿದೆ. ನಮ್ಮ ಸರ್ಕಾರ ಸಹ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು. ಸಿಎಂ ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಕೊನೆ ಕ್ಷಣದಲ್ಲಿ ಅವರು ಬರಲು ಆಗಿಲ್ಲ. ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಮ್ಮ ಸರ್ಕಾರ ಮಾಡಿದೆ ಎಂದರು.