ಗಂಗಾವತಿ: ಇತ್ತೀಚೆಗಷ್ಟೇ ಆನೆಗೊಂದಿಯ ವಾಲಿಕಿಲ್ಲಾ ಪ್ರದೇಶದಲ್ಲಿನ ಮೇಗೋಟೆ ಆದಿಶಕ್ತಿ ದುರ್ಗಾ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಇದೀಗ ತಾಲೂಕಿನ ಮತ್ತೊಂದು ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟದ ಹನುಮ ದೇಗುಲವನ್ನು ಭಕ್ತರ ದರ್ಶನದಿಂದ ನಿರ್ಬಂಧಿಸುವ ವಿಚಾರ ಮುನ್ನೆಲೆಗೆ ಬಂದಿದೆ.
ಚಿರತೆ ಕಾಟ: ದುರ್ಗಾ ಬೆಟ್ಟದ ಬೆನ್ನಲ್ಲೇ ಅಂಜನಾದ್ರಿ ದೇಗುಲ ಬಂದ್....?
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟದಲ್ಲಿ ಚಿರತೆಗಳ ಚಲನವಲನ ಕಂಡು ಬಂದ ಹಿನ್ನೆಲೆ ಅಂಜನಾದ್ರಿ ಬೆಟ್ಟದ ಹನುಮ ದೇಗುಲ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಲು ಅರಣ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ದುರ್ಗಾ ಬೆಟ್ಟದಲ್ಲಿ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿ ಕೊಂದಿತ್ತು. ಈ ಹಿನ್ನೆಲೆ ಬೆಟ್ಟಕ್ಕೆ ಬರುತ್ತಿದ್ದ ಭಕ್ತರ ಪ್ರವೇಶ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಚಿರತೆಗಳ ಓಡಾಟ ಕಂಡು ಬಂದಿರುವ ಹಿನ್ನೆಲೆ ಅರಣ್ಯ ಇಲಾಖೆ ಬಿಗಿ ಕ್ರಮಕ್ಕೆ ಮುಂದಾಗಿದೆ. ಸೋಮವಾರ ಸಂಜೆಯಷ್ಟೆ ಅಂಜನಾದ್ರಿ ಬೆಟ್ಟದಲ್ಲಿ ಚಿರತೆಯ ಚಲನವಲನ ಕಂಡು ಬಂದಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಲಭಿಸಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಭಕ್ತರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ದೇಗುಲ ಪ್ರವೇಶ ಸ್ಥಗಿತಗೊಳಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಈ ಬಗ್ಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.