ಕೊಪ್ಪಳ: ಅನ್ಯಾಯ ಮಾಡಿದವರಿಗೆ ಖಂಡಿತ ಶಿಕ್ಷೆಯಾಗುತ್ತದೆ ಎಂಬುದಕ್ಕೆ ಗಂಗಾ ಕುಲಕರ್ಣಿ ಅವರ ಸಾವೇ ನಿದರ್ಶನ ಎಂದು ಗಂಗಾ ಕುಲಕರ್ಣಿಗೆ ಜಾಮೀನು ಕೊಡಿಸಿದ್ದ ನ್ಯಾಯವಾದಿ ಎಸ್.ಡಿ. ಮುತಾಲಿಕ್ ಅಭಿಪ್ರಾಯಪಟ್ಟಿದ್ದಾರೆ.
ಕುಷ್ಟಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಂಗಾ ಕುಲಕರ್ಣಿ ಮೇಲೆ ಕುಷ್ಟಗಿಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಈ ಮಹಿಳೆಗೆ ಜಾಮೀನು ಸಿಕ್ಕಿರಲಿಲ್ಲ. ಕಾನೂನು ನೆರವಿನ ಅಡಿ ನಾನು ಆ ಮಹಿಳೆಗೆ ಪರವಾಗಿ ವಕೀಲನಾಗಿ ಕೆಲಸ ಮಾಡಿ ಜಾಮೀನು ದೊರೆಯುವಂತೆ ಮಾಡಿದ್ದೆ. ಬಳಿಕ ಆ ಮಹಿಳೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಅಲ್ಲದೇ, ಕೆಲ ಬಾರಿ ಬೇರೆ ವಕೀಲರನ್ನು ಕರೆದುಕೊಂಡು ಬಂದಿದ್ದಳು.
ನ್ಯಾಯಾಲಯಕ್ಕೆ ಶೂರಿಟಿ ಹಣ ನಾನು ಪಾವತಿಸುವ ಸಂದರ್ಭ ಬಂದಿತ್ತು. ನ್ಯಾಯಾಲಯಕ್ಕೆ ಹಾಜರಾಗುವಂತೆ ನಾನೇ ಸಾಕಷ್ಟು ಬಾರಿ ಹೇಳಿದ್ದೆ. ಇತ್ತೀಚಿಗೆ ಅವರು ನನ್ನ ಸಂಪರ್ಕದಲ್ಲಿ ಇರಲಿಲ್ಲ. ಇಂದು ಹೇಗೆ ಬಂದಳು ಎಂಬುದು ಗೊತ್ತಿಲ್ಲ. ವಿಷಯ ತಿಳಿದ ಬಳಿಕ ಆಸ್ಪತ್ರೆಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಜ್ಯೋತಿ ಅಲಿಯಾಸ್ ಗಂಗಾ ಕುಲಕರ್ಣಿ ಎಂಬುದು ಖಾತ್ರಿಯಾಯಿತು. ಈ ಮೂಲಕ ಅನ್ಯಾಯ ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ ಅನ್ನೋದಕ್ಕೆ ಇವರೇ ನಿದರ್ಶನ ಎಂದು ನ್ಯಾಯವಾದಿ ಮುತಾಲಿಕ್ ತಾವು ಕಂಡ ಸತ್ಯಾಂಶವನ್ನು ಈ ರೀತಿ ಬಿಚ್ಚಿಟ್ಟರು.
ನ್ಯಾಯವಾದಿ ಎಸ್.ಡಿ. ಮುತಾಲಿಕ್ ಖ್ಯಾತ ಚಿತ್ರ ಸಾಹಿತಿ, ಪ್ರೇಮಕವಿ ಕೆ. ಕಲ್ಯಾಣ್ ಬಾಳಲ್ಲಿ ಬಿರುಕು ಮೂಡಿಸಿದ್ದ ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷ ಸೇವಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕುಲಕರ್ಣಿ, ಕುಸಿದು ಬಿದ್ದಿದ್ದಳು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.