ಕೊಪ್ಪಳ :ಕೊರೊನಾ ಸಂದಿಗ್ಥ ಪರಿಸ್ಥಿತಿಯಲ್ಲಿ ಜನರಿಗೆ ಅತೀ ಅಗತ್ಯವಾಗಿ ಸೇವೆ ನೀಡಬೇಕಿದ್ದಜಿಲ್ಲೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ.
ಸಿಬ್ಬಂದಿ ಕೊರತೆ: ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಕೊಪ್ಪಳದ ಆಯುಷ್ ಆಸ್ಪತ್ರೆಗಳು - ಹೆಸರಿಗೆ ಮಾತ್ರ ಇರುವ ಕೊಪ್ಪಳದ ಆಯುಷ್ ಆಸ್ಪತ್ರೆ
ಕೊಪ್ಪಳ ಜಿಲ್ಲೆಯಲ್ಲಿರುವ ಆಯುಷ್ ಇಲಾಖೆಯ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಕೊರೊನಾ ಸಂದರ್ಭದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕಿದ್ದ ಆಸ್ಪತ್ರೆಗಳು ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ.
ಜಿಲ್ಲೆಯ ಬಹುತೇಕ ಸರ್ಕಾರಿ ಆಯುರ್ವೇದ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಲ್ಲಿ ಕಸ ಗುಡಿಸಲೂ ಯಾರೂ ಇಲ್ಲ ಪರಿಸ್ಥಿತಿಯಿದೆ. ಕೊಪ್ಪಳ ನಗರ, ಕಿನ್ನಾಳ, ಕಾಮನೂರು, ಗಿಣಗೇರಿ, ಗಂಗಾವತಿ ನಗರ, ನಂದಿಹಳ್ಳಿ, ಮುಸಲಾಪುರ, ಹಣವಾಳ, ಗೌರಿಪುರ, ಚಿಕ್ಕಮಾದಿನಾಳ, ಹುಲಿಹೈದರ, ಆಗೋಲಿ, ಮಲ್ಲಾಪುರ, ನವಲಿ (ಯುನಾನಿ ಚಿಕಿತ್ಸಾಲಯ), ಯಡ್ಡೋಣಿ, ಬಂಡಿ, ಕುಷ್ಟಗಿ (ಹೋಮಿಯೋಪತಿ ಚಿಕಿತ್ಸಾಲಯ), ಎಂ. ಗುಡದೂರು ಹಾಗೂ ಯಲಬುರ್ಗಾ ಪಟ್ಟಣ ಸೇರಿ ಜಿಲ್ಲೆಯ 21 ಕಡೆಗಳಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳು ಇವೆ. ಇವುಗಳಿಗೆ ಜಿಲ್ಲಾ ಪಂಚಾಯತ್ನಿಂದ ಮಂಜೂರಾದ ಹುದ್ದೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಆಯುರ್ವೇದ ಆಸ್ಪತ್ರೆಗಳು ಇದ್ದೂ ಇಲ್ಲದಂತಾಗಿದೆ.
ಜಿಲ್ಲಾ ಪಂಚಾಯತ್ನಿಂದ ಮಂಜೂರಾದ ಒಟ್ಟು 79 ಹುದ್ದೆಗಳ ಪೈಕಿ 30 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ 49 ಹುದ್ದೆಗಳು ಖಾಲಿ ಇವೆ. ಜಿಲ್ಲೆಯ ಐದು ಆಯುರ್ವೇದ ಆಸ್ಪತ್ರೆಗಳಲ್ಲಿ ವೈದ್ಯರೂ ಇಲ್ಲ, ಡಿ ಗ್ರೂಪ್ ಸಿಬ್ಬಂದಿಯೂ ಇಲ್ಲ. ಸದ್ಯ, ಈ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ತಮ್ಮ ಸ್ವಂತ ಖರ್ಚಿನಿಂದ ಸ್ವಚ್ಚ ಮಾಡಿಸಿಕೊಳ್ಳಬೇಕಾಗಿದೆ. ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಖಾಲಿ ಇರುವ ಹುದ್ದೆಗಳ ಪೂರ್ಣಪ್ರಮಾಣದ ಭರ್ತಿಗೆ ಅಥವಾ ತಾತ್ಕಾಲಿಕ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಸವರಾಜ ಕುಂಬಾರ ಹೇಳಿದ್ದಾರೆ.