ಕೊಪ್ಪಳ: ಈ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕೊಪ್ಪಳ ನಗರದಲ್ಲಿ ಆರಂಭವಾಗಿರುವ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಅಜ್ಞಾತವಾಗಿ ಉಳಿದುಕೊಂಡಿದೆ. ಸ್ನಾತಕೋತ್ತರ ಕೇಂದ್ರದ ಮಾರ್ಗಸೂಚಿಸುವ ಒಂದೇ ಒಂದು ನಾಮಫಲಕವಿಲ್ಲದೆ ಇರುವುದರಿಂದ ಸ್ನಾತಕೋತ್ತರ ಕೇಂದ್ರಕ್ಕೆ ಬಂದು ತಲುಪುವುದಕ್ಕೆ ವಿದ್ಯಾರ್ಥಿಗಳು ಹರಸಾಹಸಪಡಬೇಕಾಗಿದೆ. ಈಗ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಬಳ್ಳಾರಿ ವಿಶ್ವವಿದ್ಯಾಲಯದ ಕೊಪ್ಪಳ ಪಿಜಿ ಸೆಂಟರ್ನಲ್ಲಿ ಮೂಲ ಸೌಕರ್ಯಗಳ ಕೊರತೆ - ಬಳ್ಳಾರಿ ಜಿಲ್ಲೆ ಸುದ್ದಿ
ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೊಂದು ಸ್ವಂತ ಕಟ್ಟಡವಿಲ್ಲದೆ, ಈ ಪಿಜಿ ಸೆಂಟರ್ನ ಆವರಣ ಗಬ್ಬೆದ್ದು ನಾರುತ್ತಿದೆ. ಹಳೆ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಈ ಪಿಜಿ ಸೆಂಟರ್ ಜೊತೆಗೆ ಆರೋಗ್ಯ ಇಲಾಖೆಯ ಕೆಲ ಕಚೇರಿಗಳು ಇವೆ.
ಹೌದು, ಕೊಪ್ಪಳ ನಗರದ ಜಿಲ್ಲಾಸ್ಪತ್ರೆಯ ಹಳೆ ಕಟ್ಟಡದಲ್ಲಿ 2016 ರಲ್ಲಿ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಆದರೆ, ಇದಕ್ಕೊಂದು ಸ್ವಂತ ಕಟ್ಟಡವಿಲ್ಲದೆ ಅದೇ ಹಳೆ ಕಟ್ಟಡದಲ್ಲಿ ಮುಂದುವರೆದಿದೆ. ಈ ಸ್ನಾತಕೋತ್ತರ ಕೇಂದ್ರ ಆರಂಭವಾಗಿ ನಾಲ್ಕು ವರ್ಷಗಳು ಕಳೆದರೂ ಸಹ ಈ ಕೇಂದ್ರಕ್ಕೆ ಬರಲು ಎಲ್ಲೂ ಒಂದೇ ಒಂದು ಮಾರ್ಗಸೂಚಿ ನಾಮಫಲಕಗಳು ಇಲ್ಲ. ಹೀಗಾಗಿ ಈ ಸ್ನಾತಕೋತ್ತರ ಕೇಂದ್ರ ಹುಡುಕಿಕೊಂಡು ಬರಬೇಕಾದರೆ ವಿದ್ಯಾರ್ಥಿಗಳ ಕಥೆ ಏಳುಹನ್ನೊಂದಾಗಿರುತ್ತದೆ.
ಈಗ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಆರಂಭವಾಗಿದೆ. ದಾಖಲಾತಿಗಳ ಪರಿಶೀಲನೆಗೆ ಬರುವ ವಿದ್ಯಾರ್ಥಿಗಳು ಸ್ನಾತಕೋತ್ತರ ಕೇಂದ್ರವನ್ನು ಹುಡುಕುವುದರಲ್ಲಿ ಸುಸ್ತಾಗುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಈ ಪಿಜಿ ಸೆಂಟರ್ನ ಆವರಣ ಗಬ್ಬೆದ್ದು ನಾರುತ್ತಿದೆ. ಹಳೆ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಈ ಪಿಜಿ ಸೆಂಟರ್ ಜೊತೆಗೆ ಆರೋಗ್ಯ ಇಲಾಖೆಯ ಕೆಲ ಕಚೇರಿಗಳು ಇವೆ. ಕಚೇರಿಗಳ ಮುಂದಿನ ಒಂದಿಷ್ಟು ಜಾಗ ಸ್ವಚ್ಛವಾಗಿರವುದು ಬಿಟ್ಟರೆ ಉಳಿದ ಎಲ್ಲ ಜಾಗವು ಗಬ್ಬೆದ್ದು ನಾರುತ್ತಿದೆ. ಅದರಲ್ಲೂ ಪಿಜಿ ಸೆಂಟರ್ ಮುಂದಿರುವ ಜಾಗವಂತೂ ಕೊಳಚೆ ಪ್ರದೇಶಕ್ಕಿಂತಲೂ ಕಡೆಯಾಗಿದೆ. ಹೀಗಾಗಿ ಅಲ್ಲಿನ ವಾತಾವರಣದಿಂದಾಗಿ ಪಿಜಿ ಸೆಂಟರ್ ಗೆ ಬರುತ್ತಿರುವ ವಿದ್ಯಾರ್ಥಿಗಳು ಹೈರಾಣಾಗುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳು ಈಗ ಈ ಪಿಜಿ ಸೆಂಟರ್ ಗೆ ದಾಖಲಾತಿಗಳ ಪರಿಶೀಲನೆಗೆ ಬರುತ್ತಿದ್ದಾರೆ. ಬಂದಿರುವ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ಸ್ಥಳ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರು ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.