ಕುಷ್ಟಗಿ (ಕೊಪ್ಪಳ): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೊಬ್ಬ ಲ್ಯಾಬ್ ಟೆಕ್ನಿಷಿಯನ್ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಕದಳೀ ನಗರದಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಯಡ್ಡೋಣಿ ನಿವಾಸಿ ಮಂಜುಳಾ ಮಂಜುನಾಥ ಕಟ್ಟಿಮನಿ (25) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಸ್ಥಳೀಯ ತಾಲೂಕು ಸರ್ಕಾರಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಮಂಜುಳಾ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೊಪ್ಪಳ ತಾಲೂಕು ಮುದ್ದಾಬಳ್ಳಿಯ ಮಂಜುನಾಥ ಕಟ್ಟಿಮನಿಯೊಂದಿಗೆ ಇವರ ವಿವಾಹವಾಗಿತ್ತು. ಪತಿ ಮಂಜುನಾಥ ಕಟ್ಟಿಮನಿ ಕೆನರಾ ಬ್ಯಾಂಕಿನಲ್ಲಿ ಅಟೆಂಡರ್ ಆಗಿ ಕೆಲಸದಲ್ಲಿದ್ದು, ಬೇರೊಂದು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಕಾರಣದಿಂದಲೇ ಮನಸ್ತಾಪದಿಂದ ಪತಿ-ಪತ್ನಿಯೊಂದಿಗೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.