ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲು ಆಧಿಸೂಚನೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ರಾಜ್ಯದ ಪುರಸಭೆ ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲು ಅಧಿಸೂಚನೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿರುವ ಕೋರ್ಟ್, ನವೆಂಬರ್ 10ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಕುಷ್ಟಗಿ ಪುರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 8, ಪಕ್ಷೇತರ 2, ಅವಿರೋಧ ಆಯ್ಕೆ1 ಒಟ್ಟಾರೆ 23 ಸದಸ್ಯ ಬಲವಿದೆ. ಇದರಲ್ಲಿ ಬಿಜೆಪಿ ತನ್ನ 8 ಸ್ಥಾನ, 2 ಪಕ್ಷೇತರ, 1 ಅವಿರೋಧ ಆಯ್ಕೆ ಸೇರಿ ಒಟ್ಟು 11 ಸ್ಥಾನದ ಜೊತೆಗೆ ಕಾಂಗ್ರೆಸ್ ಇಬ್ಬರು ಸದಸ್ಯರನ್ನು ಸೆಳೆದುಕೊಂಡು ಸದಸ್ಯ ಬಲ ಹಚ್ಚಿಸಿಕೊಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್‌ಗೆ ತಲೆ ಕೆಡಿಸಿಕೊಳ್ಳದ ಕುಷ್ಟಗಿ ಪಟ್ಟಣದ 3 ಮತ್ತು 17 ನೇ ವಾರ್ಡ್ ಸದಸ್ಯರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ.
ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿಯ 21ನೇ ವಾರ್ಡ್ ಸದಸ್ಯ ಗಂಗಾಧರಸ್ವಾಮಿ ಹಿರೇಮಠ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನ ಬೆಂಬಲಿಸಿದ ಪಕ್ಷೇತರ ಸದಸ್ಯೆ ರಾಜೇಶ್ವರಿ ಆಡೂರು ಅವರಿಗೆ ಒಲಿಯುವ ಸಾಧ್ಯತೆಗಳಿವೆ. ಹೀಗಾಗಿ ಕಾಂಗ್ರೆಸ್ ಸದಸ್ಯ ಬಲ 10 ಕ್ಕೆ ಕುಸಿದಿದ್ದು ಸರಳ ಬಹುಮತದ ಹಾದಿ ಕಾಂಗ್ರೆಸ್‌ಗೆ ಕಠಿಣವಾಗಿದೆ ಎನ್ನಲಾಗಿದೆ.