ಕುಷ್ಟಗಿ (ಕೊಪ್ಪಳ):ಕುಷ್ಟಗಿ ಪಟ್ಟಣದಲ್ಲಿ ಕೊರೊನಾ ಸೋಂಕು 300ಕ್ಕೂ ಹೆಚ್ಚು ಜನರಿಗೆ ತಗುಲಿರುವುದು ದೃಢವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪುರಸಭೆ ಸಂಪೂರ್ಣ ಸೀಲ್ಡೌನ್ ನಿರ್ಧಾರಕ್ಕೆ ಬಂದಿದೆ. ಈ ನಿರ್ಣಯಕ್ಕೆ ದ್ವಂದ್ವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕುಷ್ಟಗಿ ಪಟ್ಟಣ ಸಂಪೂರ್ಣ ಸೀಲ್ಡೌನ್ ವಿಚಾರ: ಪುರಸಭೆ ನಿರ್ಣಯಕ್ಕೆ ಶಾಸಕರಿಂದ ಆಕ್ಷೇಪ - ಕುಷ್ಟಗಿ ಪಟ್ಟಣ ಸಂಪೂರ್ಣ ಸೀಲ್ಡೌನ್ ಬೇಡ ಅಂದ ಶಾಸಕ
ಕುಷ್ಟಗಿ ಪಟ್ಟಣದಲ್ಲಿ 300 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಪುರಸಭೆ ಪಟ್ಟಣವನ್ನು ಸಂಪೂರ್ಣ ಸೀಲ್ಡೌನ್ ಮಾಡುವ ನಿರ್ಧಾರಕ್ಕೆ ಬಂದಿದೆ. ಆದರೆ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಸೀಲ್ಡೌನ್ ಬೇಡ ಎಂದಿದ್ದಾರೆ.
ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್ಐ ತಿಮ್ಮಣ್ಣ ನಾಯಕ್ ಭಾಗವಹಿಸಿದ್ದರು. ಸದರಿ ಸಭೆಯಲ್ಲಿ ಹಾಜರಿದ್ದ ಸದಸ್ಯರು, ಸರ್ಕಾರ ವಿಧಿಸುವ ಮಾರ್ಗಸೂಚಿಯನ್ವಯ ಲಾಕಡೌನ್ ಜಾರಿಯಲ್ಲಿದ್ದು, ಕುಷ್ಟಗಿ ಪಟ್ಟಣ ಸಂಪೂರ್ಣ ಸೀಲ್ಡೌನ್ಗೆ ಸಹಮತ ವ್ಯಕ್ತಪಡಿಸಿದ್ರು. ಆ ಸಂದರ್ಭ ಸೀಲ್ಡೌನ್ ಮಾಡಿದರೆ ಜನರಿಗೆ ಕಿರಾಣಿ, ತರಕಾರಿ ಮನೆ ಮನೆಗೆ ತಲುಪಿಸುವುದು, ಹಾಲು, ಶುದ್ಧ ನೀರು, ವೈದ್ಯಕೀಯ ಸೇವೆ ಸಡಿಲಿಕೆ ಹಾಗೂ ಇಡೀ ದಿನ ಪಟ್ಟಣ ಯಾವುದೇ ವಾಣಿಜ್ಯ ವಹಿವಾಟು ಬಂದ್ ಮಾಡುವ ಕುರಿತು ಪ್ರಸ್ತಾಪ ವ್ಯಕ್ತವಾಯಿತು.
ಇದೇ ವೇಳೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಕುಷ್ಟಗಿ ಪಟ್ಟಣ ಸೀಲ್ಡೌನ್ ಬೇಡ, ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆಯಲಿ ಎಂದು ಫೋನ್ ಮೂಲಕ ಸಲಹೆ ನೀಡಿದರು. ಆಗ ಸಭೆಯಲ್ಲಿ ದ್ವಂದ್ವ ಅಭಿಪ್ರಾಯ ವ್ಯಕ್ತವಾಯಿತು. ಮೇ 10 ರಂದು ಮತ್ತೆ ಸಭೆ ಕರೆದು ಶಾಸಕ ಬಯ್ಯಾಪೂರ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲು ನಿರ್ಣಯಿಸಲಾಯಿತು.