ಕರ್ನಾಟಕ

karnataka

ETV Bharat / state

ಪಾಳು ಬಿದ್ದ ಗಂಡುಗಲಿ ಕುಮಾರರಾಮನ ಸಾಮ್ರಾಜ್ಯ: ಕುಮ್ಮಟದುರ್ಗಕ್ಕೆ ಬೇಕಿದೆ ಕಾಯಕಲ್ಪ - kummattadurga place needs development

ಇತಿಹಾಸದಲ್ಲಿ 'ಪರನಾರಿ ಸಹೋದರ' ಎಂದೇ ಖ್ಯಾತಿ ಪಡೆದ ಗಂಡುಗಲಿ ಕುಮಾರರಾಮನ ಸಾಮ್ರಾಜ್ಯವಾದ ಕೊಪ್ಪಳ ಜಿಲ್ಲೆಯ ಕುಮ್ಮಟದುರ್ಗ ಅಭಿವೃದ್ಧಿ ಕಾಣದೇ ಸೊರಗಿದೆ. ಕುಮ್ಮಟದುರ್ಗದ ಕೋಟೆ, ಅರಮನೆಯ ಅವಶೇಷಗಳು, ಬೆಟ್ಟದಲ್ಲಿರುವ ಜೈನ ಬಸದಿ, ಅನೇಕ ಸ್ಮಾರಕಗಳು ವಿನಾಶದ ಅಂಚಿನಲ್ಲಿವೆ. ಹೀಗಾಗಿ ಸರ್ಕಾರ ಈ ಐತಿಹಾಸಿಕ ಸ್ಥಳದ ಕಾಯಕಲ್ಪ ಕೈಗೊಳ್ಳಬೇಕಿದೆ.

kumararamas kingdom kummatadurga place needs facilities
ಕುಮ್ಮಟದುರ್ಗಕ್ಕೆ ಬೇಕಿದೆ ಕಾಯಕಲ್ಪ

By

Published : Nov 2, 2020, 5:11 PM IST

ಕೊಪ್ಪಳ:ದೈವತ್ವಕ್ಕೇರಿ ಜನರಿಂದ ಪೂಜೆಗೊಳ್ಳುವ ರಾಜರನ್ನು ಕಾಣುವುದು ಇತಿಹಾಸದಲ್ಲಿ ವಿರಳಾತಿವಿರಳ. ಅಂತಹ ರಾಜರಲ್ಲಿ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮ ಒಬ್ಬ.

ಸ್ಥಳೀಯರಿಂದ ರಾಮಸ್ವಾಮಿ ಅಥವಾ ಕುಮಾರರಾಮ ಎಂಬ ಹೆಸರಿನಿಂದ ಇಂದಿಗೂ ಪೂಜಿಸಲ್ಪಡುತ್ತಿದ್ದಾನೆ. ಆದರೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಗಂಡುಗಲಿ ಕುಮಾರರಾಮನ ಸಾಮ್ರಾಜ್ಯದ ಅವಶೇಷಗಳು ಆತನ ಕಥೆ ಹೇಳುವಂತಾಗಿದೆ.

ಕುಮ್ಮಟದುರ್ಗಕ್ಕೆ ಬೇಕಿದೆ ಕಾಯಕಲ್ಪ
'ಪರನಾರಿ ಸಹೋದರ' ಎಂದು ಇತಿಹಾಸದಲ್ಲಿ ಖ್ಯಾತನಾಗಿ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಿಭೂತನಾದ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮನ ಸಾಮ್ರಾಜ್ಯ ಕೊಪ್ಪಳ ತಾಲೂಕಿನ ಕುಮ್ಮಟದುರ್ಗ. ವಿಜಯನಗರ ಸಾಮ್ರಾಜ್ಯಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಸಾಮ್ರಾಜ್ಯ ಇದು. ದೆಹಲಿ ಸುಲ್ತಾನರ ದಾಳಿಯ ಬಳಿಕ ಕುಮಾರರಾಮನ ಕುಮ್ಮಟದುರ್ಗ ಸಾಮ್ರಾಜ್ಯ ಪತನಗೊಂಡಿತು ಎಂದು ಇತಿಹಾಸ ಹೇಳುತ್ತದೆ. ಕುಮಾರರಾಮನ ಭಂಡಾರ‌ ಕಾವಲುಗಾರರಾಗಿದ್ದ, ಕುಮಾರರಾಮನ ಬಂಧುಗಳಾದ ಹಕ್ಕ - ಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು ಎಂದು ಹೇಳುತ್ತದೆ ಇತಿಹಾಸ.

ಜಬ್ಬಲಗುಡ್ಡ, ಮುಕ್ಕುಂಪಿ ಗುಡ್ಡ, ಆಗೋಲಿ, ಹೇಮಗುಡ್ಡ, ಕುಮ್ಮಟದುರ್ಗ ಹಾಗೂ ಹಳೆಕುಮ್ಮಟ ಸೇರಿ ಒಟ್ಟು ಏಳು ಬೆಟ್ಟಗಳ ನಡುವೆ ಬೆಟ್ಟದಲ್ಲಿ ಕುಮಾರರಾಮನ ದೇವಸ್ಥಾನವಿದೆ. ಈಗಲೂ ಕುಮಾರರಾಮನನ್ನು ಜನರು ದೇವರೆಂದು ಪೂಜಿಸಿ ಜಾತ್ರೆಯನ್ನು ಮಾಡುತ್ತಾರೆ. ಕುಮಾರರಾಮನ ಗುಡಿಯಿಂದ ಅಕ್ಕಿ ಪಡಿಯನ್ನು ಹುಲಿಗಿ ದೇವಸ್ಥಾನಕ್ಕೆ ಕಳಿಸಿದ ಬಳಿಕ ಶ್ರೀ ಹುಲಿಗೆಮ್ಮದೇವಿ ಜಾತ್ರೆ ಪ್ರಾರಂಭವಾಗುವುದು ವಾಡಿಕೆ. ಇಂತಹ ಐತಿಹಾಸಿಕ ಪುರುಷನ ಸಾಮ್ರಾಜ್ಯದ ಇತಿಹಾಸ ಸಾರುವ ಅನೇಕ ಅವಶೇಷಗಳು ಕಾಲನ ತುಳಿತಕ್ಕೊಳಗಾಗಿ ಇತಿಹಾಸದ ಗರ್ಭ ಸೇರುತ್ತಿವೆ. ಕುಮ್ಮಟದುರ್ಗದ ಕೋಟೆ, ಅರಮನೆಯ ಅವಶೇಷಗಳು, ಬೆಟ್ಟದಲ್ಲಿರುವ ಜೈನ ಬಸದಿ ಹೀಗೆ ಅನೇಕ ಸ್ಮಾರಕಗಳು ಅಳಿವಿನ ಅಂಚಿನಲ್ಲಿವೆ.

ಕುಮಾರರಾಮನ ಬಗೆಗೆ ನಿರ್ಲಕ್ಷ್ಯ ವಹಿಸಿದ ಪರಿಣಾಮ, ಕುಮಾರರಾಮ ಈ ಭಾಗದ ಜನರಿಗೆ ಮಾತ್ರ ಗೊತ್ತಿರುವ ಚಾರಿತ್ರಿಕ ಪುರುಷನಾಗಿ ಉಳಿದುಕೊಂಡಿದ್ದಾನೆ ಎಂಬುದು ಈ ಭಾಗದ ಜನರ ಬೇಸರ. ಕಾಲಗರ್ಭದಲ್ಲಿ ಹೂತು ಹೋಗುತ್ತಿರುವ ಗಂಡುಗಲಿ ಕುಮಾರರಾಮನ ಕಮ್ಮಟ ದುರ್ಗದ ಅವಶೇಷಗಳನ್ನು ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಪುನರುಜ್ಜೀವನಗೊಳಿಸಲು ಮುಂದಾಗಬೇಕು ಹಾಗೂ ಇದನ್ನೊಂದು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸುವ ಮೂಲಕ ಮುಂದಿನ ಪೀಳಿಗೆಗೆ ಈ ಭವ್ಯ ಇತಿಹಾಸವನ್ನು ಸಂರಕ್ಷಿಸಬೇಕು ಎನ್ನುತ್ತಾರೆ ಸ್ಥಳೀಯರಾದ‌ ಪಾಮನಾಯಕ ವಾಲ್ಮೀಕಿ. ಒಟ್ಟಾರೆಯಾಗಿ ಇತಿಹಾಸದಲ್ಲಿ ದೈವತ್ವಕ್ಕೇರಿದ ಗಂಡುಗಲಿ ಕುಮಾರರಾಮನ ಸ್ಮಾರಕಗಳ ಕಾಯಕಲ್ಪಕ್ಕೆ ಸರ್ಕಾರ ಮುಂದಾಗಬೇಕಿದೆ.

For All Latest Updates

ABOUT THE AUTHOR

...view details