ಗಂಗಾವತಿ: ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಆಕಸ್ಮಿಕವಾಗಿ ಕುಟುಂಬ ಸಮೇತರಾಗಿ ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬೀದಿಬದಿಯಲ್ಲಿ ನಿಂತು ಚಹಾ ಕುಡಿದು ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಮೂಲಕ ಗಮನ ಸೆಳೆದರು.
ಗಂಗಾವತಿ ನಗರಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದ ಕುಮಾರ್ ಬಂಗಾರಪ್ಪ ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಮನ ಆಶೀರ್ವಾದ ಪಡೆಯಲು ಕೋಟಿಗಟ್ಟಲೆ ಹಣ ನೀಡಬೇಕು ಎಂದೇನಿಲ್ಲ. ಕೇವಲ ಹತ್ತು ರೂಪಾಯಿ ನೀಡುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ನೆರವಾಗಿ ರಾಮನ ಪ್ರೀತಿಗೆ ಪಾತ್ರವಾಗಬಹುದು ಎಂದರು.
ಇದೇ ಸಂದರ್ಭದಲ್ಲಿ ಮಧು ಬಂಗರಾಪ್ಪ ಬಿಜೆಪಿ ಪಕ್ಷಕ್ಕೆ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್ ಬಂಗಾರಪ್ಪ, ಮಧುಗೆ ಎಲ್ಲಾ ದೇವರು ಒಳ್ಳೆಯದನ್ನು ಮಾಡಲಿ. ನಾವು ಅಣ್ಣ-ತಮ್ಮ ಬೇರೆ ಬೇರೆ ಅಲ್ಲ, ನಮ್ಮ ನಡುವೆ ಮೂರನೇ ವ್ಯಕ್ತಿ ಬಂದು ಸಾಮರಸ್ಯ ಮೂಡಿಸುವ ಅಗತ್ಯವಿಲ್ಲ. ಬಂಗಾರಪ್ಪ ಹೇಗೆ ರಾಜ್ಯದ ಹಿತ ಕಾಪಾಡಿ ರಾಜಕಾರಣ ಮಾಡಿದರೋ ಹಾಗೆ ನಾವಿಬ್ಬರು ಅಭಿವೃದ್ಧಿಗಾಗಿ ರಾಜಕೀಯ ಮಾಡುತ್ತೇವೆ. ನಮ್ಮ ಕುಟುಂಬದ ಸಮಸ್ಯೆ ಇತ್ಯರ್ಥಕ್ಕೆ ಹೊರಗಿನ ವ್ಯಕ್ತಿ ಅಗತ್ಯವಿಲ್ಲ ಎಂದರು.
ಬಂಗಾರಪ್ಪನವರ ಹೆಸರು ತೆಗೆದುಕೊಂಡು ಹೋಗಲು ನಾವು ಇಬ್ಬರೂ ಸಮರ್ಥವಾಗಿದ್ದೇವೆ. ಜನರ ಆಶೀರ್ವಾದದಿಂದ ನಾವು ಜೊತೆಯಾಗಿದ್ದೇವೆ. ಯಾವುದೇ ತೊಂದರೆ ಇಲ್ಲ. ನಮ್ಮ ನಡುವೆ ಯಾರೂ ಮಧ್ಯಸ್ಥಿಕೆ ಮಾಡುವುದಿಲ್ಲ ಎಂದರು.