ಕೊಪ್ಪಳ: ಮಾಜಿ ಪ್ರಧಾನಿ, ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರಿಗೆ ಏನಾದರು 28 ಜನ ಮಕ್ಕಳಿದ್ದಿದ್ದರೆ ಆ 28 ಮಕ್ಕಳಿಗೂ ಟಿಕೆಟ್ ನೀಡಿ ಚುನಾವಣೆಗೆ ನಿಲ್ಲಿಸುತ್ತಿದ್ದರು. ಪಾಪ ಅವರಿಗೆ 14 ಜನ ಮಕ್ಕಳಾದರು ಇರಬೇಕಾಗಿತ್ತು. ಆ 14 ಜನ ಮಕ್ಕಳಿಗೆ 14 ಜನ ಸೊಸೆಯಂದಿರು ಇರುತ್ತಿದ್ದರು. ಇವರೆಲ್ಲರಿಗೂ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ದೇವೇಗೌಡರಿಗೆ 14 ಜನ ಮಕ್ಕಳು ಇಲ್ಲವಲ್ಲ ಎಂಬ ನೋವಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ ನೋಡುತ್ತಿದ್ದೆವು. ವಂಶ ಪಾರಂಪರ್ಯವಾಗಿ ಅಲ್ಲಿ ಕುಟುಂಬ ರಾಜಕಾರಣ ನೋಡಿದ್ದೇವೆ. ಈಗ ದೇವೇಗೌಡರ ಕುಟುಂಬಕ್ಕೂ ಬಂದಿದೆ. ಹಾಸನ ಕ್ಷೇತ್ರವನ್ನು ದೇವೇಗೌಡರು ತಮ್ಮ ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಅದರಿಂದ ದೇಶಕ್ಕೆ ನಷ್ಟವಾಯಿತು ಎಂಬ ರೀತಿಯಲ್ಲಿ ದೇವೇಗೌಡ, ಭವಾನಿ ರೇವಣ್ಣ, ರೇವಣ್ಣ, ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದರು. ಇನ್ನು ಹಾಸನ, ಮಂಡ್ಯ ಮತ್ತು ತುಮಕೂರಿನಲ್ಲಿ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡ ಸೋಲುವುದು ಖಚಿತ. ಬಳಿಕ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಇನ್ನು ಸ್ವಯಂಘೋಷಿತ ಕುರುಬ ನಾಯಕನಾಗಿರುವ ಸಿದ್ದರಾಮಯ್ಯನ ತಲೆಯಲ್ಲಿ ಸಗಣಿ ತುಂಬಿದೆ. ಮೆದುಳು ಸರಿ ಇಲ್ಲ ಎಂದರೆ ಮೆದುಳು ಸರಿ ಮಾಡಿಕೊಳ್ಳಬಹುದು. ಆದರೆ, ಸಗಣಿ ತುಂಬಿದ ತಲೆಯನ್ನು ಸರಿ ಮಾಡೋಕೆ ಆಗೋದಿಲ್ಲ. ಸಿದ್ದರಾಮಯ್ಯ ಕುರುಬರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಾರೆ. ಕುರುಬರಿಗೆ ಅವರು ಏನು ಮಾಡಿದ್ದಾರೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಅಲ್ಲದೆ, ಕುರುಬರ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನನ್ನು ಚಾಮುಂಡೇಶ್ವರಿಯಲ್ಲಿ ಕುರುಬರೇ ಸೋಲಿಸಿದ್ದಾರೆ. ನಾವು ರಾಜ್ಯದಲ್ಲಿ ಮುಸ್ಲಿಮರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡುವುದಿಲ್ಲ. ಯಾಕೆಂದರೆ ಅವರು ನಮ್ಮ ಮೇಲೆ ವಿಶ್ವಾಸವಿಟ್ಟಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿಯಿಂದ ಮುಸ್ಲಿಮರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡುವುದಿಲ್ಲ. ಒಂದು ವೇಳೆ ಇಕ್ಬಾಲ್ ಅನ್ಸಾರಿ ಬಿಜೆಪಿಗೆ ಬಂದು ಟಿಕೆಟ್ ಕೇಳಿದರೂ ನಮ್ಮ ಬಿಜೆಪಿ ಕಚೇರಿಯಲ್ಲಿ 10 ವರ್ಷ ಕಸ ಗೂಡಿಸಿ ಸೇವೆ ಮಾಡಲಿ. ಬಳಿಕ ಕ್ಷೇತ್ರದ ಜನರು ಬಯಸಿದರೆ ಮುಂದೆ ನೋಡೋಣ ಎಂದರು.
ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಮಂಡ್ಯದಲ್ಲಿ ಸುಮಲತಾ ಗೆಲ್ಲುತ್ತಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ವ್ಯಾಪಾರಿಗಳ ಮನೆಯಲ್ಲಿ ಸಾಮಾನ್ಯವಾಗಿ ನೋಟು ಎಣಿಕೆ ಮಷಿನ್ ಇರುತ್ತವೆ. ಈಶ್ವರಪ್ಪ ಮನೇಲಿ ನೋಟು ಇದೆ ಎನ್ನುವವರ ಮನೇಲಿ ನೋಟು ಪ್ರಿಂಟ್ ಮಾಡೋ ಮಷಿನ್ ಇದ್ದರೂ ಇರಬಹುದು ಎಂದು ಅವರು ಟಾಂಗ್ ನೀಡಿದರು.