ಗಂಗಾವತಿ :ಮುಂದಿನ ವಿಧಾನಸಭೆ ಚುನಾವಣೆಯ ಬಳಿಕ ನಾನು ಕಿಂಗ್ ಆಗ್ತೀನೊ ಅಥವಾ ಕಿಂಗ್ ಮೇಕರ್ ಆಗ್ತಿನೋ ಎಂಬುವುದನ್ನು ನೀವೇ ಕಾಯ್ದು ನೋಡಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಹೇಳಿದರು. ನಗರದ ಕನಕಗಿರಿ ರಸ್ತೆಯಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿನ ಪ್ರತಿಯೊಂದನ್ನು ಅನುಷ್ಠಾನಕ್ಕೆ ತರುತ್ತೇನೆ. ರಾಜ್ಯದಲ್ಲಿ ನಮ್ಮ ಸರ್ಕಾರ ರಚನೆಯಾಗದಿದ್ದರೂ ಅಧಿಕಾರ ನಡೆಸುವ ಪಕ್ಷಕ್ಕೆ ಬೆಂಬಲ ನೀಡಿಯಾದರೂ ನಮ್ಮ ಪ್ರಣಾಳಿಕೆ ಜಾರಿಗೆ ಯತ್ನಿಸುತ್ತೇನೆ. ನಾನು ಕಿಂಗ್ ಆಗದಿದ್ದರೂ ಪರ್ವಾಗಿಲ್ಲ. ಕಿಂಗ್ ಮೇಕರ್ ಆಗುತ್ತೇನೆ ಎಂದು ರೆಡ್ಡಿ ಹೇಳಿದರು.
ಇಡೀ ರಾಜ್ಯಾದ್ಯಂತ 224 ಕ್ಷೇತ್ರಗಳಿಗೆ ನನ್ನ ಪಕ್ಷದ ಅಭ್ಯರ್ಥಿಗಳನ್ನು ಹಾಕಿ ನಾನು 113ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇನೆ ಎಂದು ಹೇಳುತ್ತಿಲ್ಲ. ಬದಲಿಗೆ ನನ್ನ ಪ್ರಭಾವ ಇರುವ, ಈಗಾಗಲೇ ನಾನು ಸಮೀಕ್ಷೆ ನಡೆಸಿದಂತೆ ಗೆಲುವಿನ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತಿದ್ದೇನೆ. ಈಗಾಗಲೇ 30ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮಗೊಂಡಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುವುದಾಗಿ ಹೇಳಿದರು.
ಯುವಜನರಿಗೆ, ಮಹಿಳೆಯರಿಗೆ ಪ್ರಣಾಳಿಕೆ ಬಿಡುಗಡೆ :ಈಗಾಗಲೇ ಪಕ್ಷದಿಂದ ರೈತರ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಈ ಪ್ರಣಾಳಿಕೆಯನ್ನು ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನೇ ಮಂಡಿಸಿದ್ದೆ. ಈ ಅಂಶಗಳನ್ನು ಕ್ಯಾಬಿನೆಟ್ನಲ್ಲಿ ಚರ್ಚಿಸಿ ಅಂತಿಮ ಆದೇಶ ಕೈಗೊಳ್ಳಲಾಗಿತ್ತು. ಆದರೆ ಅದು ಜಾರಿಯಾಗಿರಲಿಲ್ಲ. ಅವುಗಳನ್ನೇ ನನ್ನ ಪಕ್ಷದ ಪ್ರಣಾಳಿಕೆಯನ್ನಾಗಿಸಿದ್ದೇನೆ ಎಂದರು.
ಮಾ.6ರಂದು ಯುವಜನರಿಗಾಗಿ ಪಕ್ಷದಿಂದ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದೇನೆ. ವೀರ ಸಂಗೊಳ್ಳಿ ರಾಯಣ್ಣ ಯುವ ಸಬಲೀಕರಣ ಎಂಬ ಯೋಜನೆಯಡಿ ಯುವಕರಿಗೆ ಹತ್ತಾರು ಯೋಜನೆ ಘೋಷಣೆ ಮಾಡಲಿದ್ದೇನೆ. ಡಾ.ಬಿ.ಆರ್. ಅಂಬೇಡ್ಕರ್, ಓನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಮೊದಲಾದ ಮಹಾನೀಯರ ಹೆಸರಲ್ಲಿ ಸಮಾಜದ ಎಲ್ಲಾ ವರ್ಗದವರಿಗೆ ಉಪಯುಕ್ತವಾಗುವ ದೃಷ್ಟಿಯಿಂದ ಹತ್ತಾರು ಉಪ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇನೆ ಎಂದು ತಿಳಿಸಿದರು.