ಕುಷ್ಟಗಿ (ಕೊಪ್ಪಳ): ಗದ್ದೇರಹಟ್ಟಿ ಅರಣ್ಯವಾಸಿಗಳ ಸ್ಥಳಾಂತರಕ್ಕೆ ಮೀಸಲು ಅರಣ್ಯ ಪ್ರದೇಶ ಹೊರತುಪಡಿಸಿ, ಅವರ ಮುಂದೆ ಹಲವು ಪ್ರಸ್ತಾವನೆಗಳಿವೆ. ಕುಷ್ಟಗಿ ತಹಶೀಲ್ದಾರ್ ಹಾಗೂ ತಾವರಗೇರಾ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲು ನಿವಾಸಿಗಳ ವಿವೇಚನೆಗೆ ಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಾಳ್ಕರ್ ಹೇಳಿದರು.
ಮೀಸಲು ಅರಣ್ಯ ಪ್ರದೇಶದ ಗದ್ದೇರಹಟ್ಟಿ ಗ್ರಾಮ ಸ್ಥಳಾಂತರ, ಡಿಸಿ ಭೇಟಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ಗದ್ದೇರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳ ಅಹವಾಲು ಆಲಿಸಿ ಈ ವಿಷಯ ಪ್ರಸ್ತಾಪಿಸಿದರು. ಮೀಸಲು ಅರಣ್ಯ ಸ.ನಂ. 148ರಲ್ಲಿ ವಾಸವಾಗಿದ್ದು, ಸ್ಥಳೀಯರ ಬೇಡಿಕೆಯಂತೆ ಸ.ನಂ.154ರ ಸರ್ಕಾರಿ ಪಡಾಭೂಮಿಗೆ ಸ್ಥಳಾಂತರಕ್ಕೆ ಬೇಡಿಕೆ ಪ್ರಸ್ತಾಪಿಸಿದ್ದರು. ಆದರೆ ಆ ಪ್ರದೇಶ ಅರಣ್ಯ ಇಲಾಖೆಗೆ ಹಸ್ತಾಂತರಗೊಂಡಿದ್ದು, ಅಲ್ಲಿ ಏನೂ ಮಾಡಲು ಬರುವುದಿಲ್ಲ. ಕೃಷಿ ಜಮೀನುಗಳ ಅಭಿವೃದ್ಧಿ ಜೀವನ ನಿರ್ವಹಣೆ ಹಿನ್ನೆಲೆಯಲ್ಲಿ ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಸಂಗನಾಳ ಗ್ರಾ.ಪಂ. ವ್ಯಾಪ್ತಿಯ ಕನ್ನಾಳ ಸೀಮಾ ವ್ಯಾಪ್ತಿಯಲ್ಲಿರುವ ಸ.ನಂ.87ರಲ್ಲಿ ಸರ್ಕಾರಿ ಪಡಾ ಭೂಮಿಗೆ ಸ್ಥಳಾಂತರಕ್ಕೆ ಸಮ್ಮಿತಿಸಿದಲ್ಲಿ ಅಲ್ಲಿಯೂ ಅವರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು, ಇಲ್ಲವೇ ವಸತಿ ಯೋಜನೆಗಳಲ್ಲಿ ಮನೆಗಳನ್ನು ನಿರ್ಮಿಸಲು ಹಾಗೂ ಸರ್ಕಾರದಿಂದ ಪುನರ್ವಸತಿಗಾಗಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಪೂರಕ ನೆರವು ನೀಡಲಾಗುವುದು. ಗ್ರಾ.ಪಂ. ವ್ಯಾಪ್ತಿಯ ಸ.ನಂ.87 ರ ಸರ್ಕಾರಿ ಪಡಾ ಭೂಮಿಗೆ ಸ್ಥಳಾಂತರಕ್ಕೆ ಸಮ್ಮತಿಸಿದರೆ ಅದನ್ನು ಅಂತಿಮಗೊಳಿಸುವ ಇಂಗಿತ ವ್ಯಕ್ತಪಡಿಸಿದರು.
ಈ ಕುರಿತು ಗದ್ದೇರಹಟ್ಟಿ ಗ್ರಾಮಸ್ಥರ ಪರವಾಗಿ ವಿಷಯ ಪ್ರಸ್ತಾಪಿಸಿದ ಅವರು, ಉಮೇಶ ದಾಸರ ಅವರು, ಗೋವು, ಕುರಿ ಸಾಕಣಿಕೆ ಕೃಷಿ ಚಟುವಟಿಕೆಗಳಿಗೆ ಬೇರೆಡೆ ಸ್ಥಳಾಂತರಗೊಂಡರೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ಸದ್ಯ ವಾಸವಿರುವ ಸ.ನಂ. 148ರಿಂದ ಸ.ನಂ.87ರ ಸರ್ಕಾರಿ ಪಡಾ ಭೂಮಿಯಲ್ಲಿ ಸ್ಥಳಾಂತರಗೊಳ್ಳಲು ಇಚ್ಛಿಸಿದ್ದು ಗದ್ದೇರಹಟ್ಟಿ ಕಂದಾಯ ಗ್ರಾಮವನ್ನಾಗಿ ರೂಪಿಸಬೇಕು ಎಂದು ಗ್ರಾಮಸ್ಥರ ಪರವಾಗಿ ಜಿಲ್ಲಾಧಿಕಾರಿಗಳಲ್ಲಿ ನಿವೇದಿಸಿಕೊಂಡರು.