ಕೊಪ್ಪಳ:ಕೊರೊನಾ ಸೋಂಕು ವ್ಯಾಪಕವಾಗಿ ಹರಡಿ ಗ್ರಾಮೀಣ ಪ್ರದೇಶಕ್ಕೂ ಲಗ್ಗೆಯಿಟ್ಟಿದೆ. ಸೋಂಕು ಹರಡುತ್ತಿರುವ ಭೀತಿಯಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕೆಲ ಕುಟುಂಬಗಳ ಜನರು ಊರಲ್ಲಿನ ಮನೆಗಳಿಂದ ತಮ್ಮ ಹೊಲಗಳಿಗೆ ಶಿಫ್ಟ್ ಆಗಿ ವಾಸ ಮಾಡಲಾರಂಭಿಸಿದ್ದಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ಹರಡುವಿಕೆ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿನ ಕೆಲವರು ಸೋಂಕಿನ ಭೀತಿಯಿಂದ ಊರಿನಿಂದ ತಮ್ಮ ತಮ್ಮ ಹೊಲಗಳಿಗೆ ಶಿಫ್ಟ್ ಆಗಿ ವಾಸ ಮಾಡಲಾರಂಭಿಸಿದ್ದಾರೆ.
ಕೊಪ್ಪಳ ತಾಲೂಕಿನ ಹಿರೇಬೊಮ್ಮನಾಳ ಗ್ರಾಮ ಸೇರಿದಂತೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿನ ಜನರು ಕುಟುಂಬ ಸಮೇತ ಹೊಲದಲ್ಲಿನ ಜೋಪಡಿ, ಪಂಪ್ ಸೆಟ್ ಮನೆಗಳಲ್ಲಿ ವಾಸ ಮಾಡಲು ಶಿಫ್ಟ್ ಆಗುತ್ತಿದ್ದಾರೆ. ಬೊಮ್ಮನಾಳ ಗ್ರಾಮದಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡಿರುವುದರಿಂದ, ಒಂದು ವಾರದ ಹಿಂದಿನಿಂದ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಹೊಲದಲ್ಲಿ ವಾಸಿಸುತ್ತಿವೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿ, ಅಲ್ಲಿಯೇ ವಾಸಿಸುತ್ತಿದ್ದಾರೆ.