ಕೊಪ್ಪಳ: ಸಿಗ್ನಲ್ ಜಂಪ್, ನೋ ಪಾರ್ಕಿಂಗ್ನಲ್ಲಿ ವಾಹನ ನಿಲುಗಡೆ, ಟ್ರಿಪಲ್ ರೈಡಿಂಗ್ ಸೇರಿದಂತೆ ಇನ್ನಿತರೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಾಹನಗಳ ಮಾಲೀಕರ ಮನೆಗೆ ಕೊಪ್ಪಳ ಸಂಚಾರಿ ಪೊಲೀಸರು ನೋಟಿಸ್ ಕಳುಹಿಸಲಿದ್ದಾರೆ.
ಜಿಲ್ಲೆಯಲ್ಲಿ ಸಂಚಾರಿ ನಿಯಮಗಳು ಮತ್ತು ಅವುಗಳ ನಿರ್ವಹಣೆ ಮೇಲೆ ಸಾಲುಸಾಲು ಆಪಾದನೆಗಳನ್ನು ಜನರು ಮಾಡುತ್ತಿದ್ದರು. ಇದು ಟ್ರಾಫಿಕ್ ಪೊಲೀಸರಿಗೆ ತಲೆನೋವಾಗಿತ್ತು. ಆದರೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದು, ವಾಹನ ಸವಾರರು ತಪ್ಪು ಮಾಡಿದಲ್ಲಿ ವಾಹನದ ಮಾಲೀಕರಿಗೆ ಸಾಕ್ಷ್ಯಸಮೇತ ಮನೆಗೆ ನೋಟಿಸ್ ಕಳುಹಿಸುವ ವ್ಯವಸ್ಥೆ ಜಾರಿ ಮಾಡಿದ್ದಾರೆ.
ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಈ ಟ್ರಾಫಿಕ್ ನಿಯಮ ಪಕ್ಕದ ರಾಯಚೂರು ಜಿಲ್ಲೆಯಲ್ಲೂ ಜಾರಿಯಾಗಿದ್ದು ಸಂಚಾರ ಸುಗಮವಾಗಿದೆ. ಟ್ರಾಫಿಕ್ ಎನ್ಫೋರ್ಸ್ ಮ್ಯಾನೇಜ್‍ಮೆಂಟ್ ಸೆಂಟರ್ ರಾಯಚೂರಿನ ನಂತರ ಕೊಪ್ಪಳ ಜಿಲ್ಲೆಯಲ್ಲಿ ನಿಯಮ ಅನುಷ್ಠಾನವಾಗಿದೆ.
ಇದನ್ನೂ ಓದಿ:ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ: ಬೆಂಗಳೂರು ಪೊಲೀಸರಿಂದ ಬಿಗಿ ಭದ್ರತೆ
ಸಂಚಾರಿ ನಿಯಮಗಳನ್ನು ಮೀರಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸುಳ್ಳು ನೆಪ ಹೇಳುವುದು, ಪೊಲೀಸರಿಗೆ ಅವಾಜ್ ಹಾಕುವ ಘಟನೆಗಳು ಇನ್ಮೇಲೆ ನಡೆಯುವುದಿಲ್ಲ. ನಿಯಮಗಳನ್ನು ಉಲ್ಲಂಘನೆ ಮಾಡಿದ ಕುರಿತಂತೆ ಸಂಚಾರಿ ಪೊಲೀಸರು ಫೋಟೋ ತೆಗೆದು ದಾಖಲೆಸಹಿತ ಆ ವಾಹನದ ಮಾಲೀಕರಿಗೆ ರಿಜಿಸ್ಟರ್ ಪೋಸ್ಟ್ ಕಳುಹಿಸುತ್ತಾರೆ. ನೋಟಿಸ್ ಬಂದ ವಾಹನಗಳ ಮಾಲೀಕರು ಸೂಚಿಸಿದ ಅವಧಿಯಲ್ಲಿ ಬಂದು ದಂಡ ಪಾವತಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ ಮೋಟಾರು ಕಾಯ್ದೆ ಪ್ರಕಾರ ಪೊಲೀಸರು ಚಾರ್ಜ್‍ಶೀಟ್ ಹಾಕಲಿದ್ದಾರೆ.
ಆಟಕ್ಕುಂಟು ಲೆಕ್ಕಕ್ಕಿಲ್ಲದ ಸಿಗ್ನಲ್ಸ್: ನಗರದಲ್ಲಿ ಅತಿಹೆಚ್ಚು ಜನಸಂದಣಿ ಹೊಂದಿರುವ ಬಸ್ ನಿಲ್ದಾಣದ ಮುಂಭಾಗ, ಅಶೋಕ ವೃತ್ತ ಮತ್ತು ಬಸವೇಶ್ವರ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಜೊತೆಗೆ ಸಿಗ್ನಲ್ ಅಳವಡಿಸಲಾಗಿದೆ. ಆದರೂ ಅವುಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಒಮ್ಮೊಮ್ಮೆ ಕೆಂಪು, ಹಳದಿ, ಹಸಿರು ಮೂರು ಏಕಕಾಲದಲ್ಲಿ ಸಿಗ್ನಲ್ ತೋರಿಸುತ್ತಿರುತ್ತವೆ. ಇದರಿಂದಾಗಿ ವಾಹನ ಸವಾರರು ಅದೆಷ್ಟೋ ಸಲ ಕಂಗಾಲಾಗಿದ್ದೂ ಉಂಟು. ಆದರೆ, ಇವೆಲ್ಲ ಲೋಪಗಳ ಮಧ್ಯೆ ಮತ್ತೊಂದು ಹೊಸ ಪ್ರಯೋಗಕ್ಕೆ ಜಿಲ್ಲಾ ಪೊಲೀಸರು ಅಣಿಯಾಗಿದ್ದಾರೆ.