ಕೊಪ್ಪಳ: ಕೋವಿಡ್ ಎರಡನೇ ಅಲೆ ಜಿಲ್ಲೆಯಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಜನರನ್ನು ತೀವ್ರ ಭೀತಿಗೊಳಗಾಗಿಸಿದೆ. ಮನುಷ್ಯ ಮನುಷ್ಯರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಇದ್ದು, ಒಬ್ಬರು ಇನ್ನೊಬ್ಬರ ಹತ್ತಿರ ಸುಳಿಯುತ್ತಿಲ್ಲ. ಅಷ್ಟೇ ಯಾಕೆ ಸಾಕುಪ್ರಾಣಿಗಳನ್ನು ಸಹ ಅನುಮಾನದಿಂದ ನೋಡುವಂತಾಗಿದೆ. ಕೊರೊನಾ ಭೀತಿ ಹಿನ್ನೆಲೆ ಸಾಕು ಪ್ರಾಣಿಗಳನ್ನು ತ್ಯಜಿಸುವ ಮನೋಭಾವ ಅಲ್ಲಲ್ಲಿ ಕಂಡು ಬರುತ್ತಿದೆ.
ಮನುಷ್ಯ ಸಂಘ ಜೀವಿ. ಮನುಷ್ಯ ಹಾಗೂ ಸಾಕುಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನವರು ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕಿಕೊಂಡಿರುತ್ತಾರೆ. ಈಗ ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೋಂಕು ಮನುಷ್ಯರಿಂದ ಸಾಕು ಪ್ರಾಣಿಗಳಿಗೂ ಹರಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವೆಡೆ ಪ್ರಾಣಿಗಳಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಸಾಕುಪ್ರಾಣಿಗಳನ್ನು ತ್ಯಜಿಸುವ ಮನಸ್ಥಿತಿಗೆ ಬರುತ್ತಿರುವ ಸನ್ನಿವೇಶಗಳು ಅಲ್ಲಲ್ಲಿ ಸೃಷ್ಟಿಯಾಗುತ್ತಿವೆ ಎನ್ನಲಾಗುತ್ತಿದೆ.
ಆದರೆ ಕೊಪ್ಪಳ ಜಿಲ್ಲೆಯಲ್ಲಿ ಸದ್ಯಕ್ಕೆ ಅಂತಹ ಸನ್ನಿವೇಶವಿಲ್ಲ. ಗ್ರಾಮೀಣ ಭಾಗಗಳಲ್ಲಿನ ಮನೆಗಳಲ್ಲಿ ಸಾಮಾನ್ಯವಾಗಿ ಬೆಕ್ಕುಗಳನ್ನು ಸಾಕುತ್ತಾರೆ. ಇನ್ನು ನಾಯಿಗಳನ್ನು ಕೆಲವರು ಹೊಲದಲ್ಲಿ ಸಾಕಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ಬೇರೆ ಬೇರೆ ತಳಿಯ ನಾಯಿಗಳು ಶ್ರೀಮಂತರು ಹಾಗೂ ನಾಯಿ ಸಾಕುವ ಹವ್ಯಾಸವುಳ್ಳವರ ಮನೆಯಲ್ಲಿ ಕಂಡು ಬರುತ್ತವೆ. ಕೊರೊನಾದಂತಹ ಈ ಸಂದರ್ಭದಲ್ಲಿ ಮನುಷ್ಯರಿಂದ ಪ್ರಾಣಿಗಳಿಗೆ ಸೋಂಕು ಹರಡಬಹುದು ಎಂಬ ಭೀತಿಯಿಂದ ಜಿಲ್ಲೆಯಲ್ಲಿ ಸಾಕುಪ್ರಾಣಿಗಳನ್ನು ಅವುಗಳ ಮಾಲೀಕರು ತ್ಯಜಿಸಿರುವ ಪ್ರಕರಣಗಳ ಉದಾಹರಣೆ ಇಲ್ಲ ಎನ್ನುತ್ತಾರೆ ಸ್ಥಳೀಯರು.